ಬ್ಯಾಂಕ್‌ಗೆ ₹439 ಕೋಟಿ ವಂಚನೆ: ರಮೇಶ್‌ ಜಾರಕಿಹೊಳಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್‌ ಅನುಮತಿ

“ಸಿಐಡಿಯು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬಹುದು. ಆದರೆ, ಹೈಕೋರ್ಟ್‌ ಆದೇಶ ಮಾಡುವವರೆಗೆ ವಿಶೇಷ ನ್ಯಾಯಾಲಯವು ಆರೋಪ ಪಟ್ಟಿ ಸಂಬಂಧ ಆತುರದ ಕ್ರಮಕೈಗೊಳ್ಳಬಾರದು” ಎಂದು ಆದೇಶಿಸಿದ ಹೈಕೋರ್ಟ್.‌
Ramesh Jarakiholi and Karnataka HC
Ramesh Jarakiholi and Karnataka HC
Published on

ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ ಪಡೆದಿರುವ ಸಾಲ ಮತ್ತು ಬಡ್ಡಿಯ ಹಣ ಸೇರಿ ಭರ್ತಿ ₹439 ಕೋಟಿ ಪಾವತಿಸದೇ ವಂಚಿಸಿರುವ ಆರೋಪದ ಸಂಬಂಧ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಮತ್ತಿತರರ ವಿರುದ್ಧದ ದಾಖಲಾಗಿರುವ ಪ್ರಕರಣದ ಕುರಿತು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಸಿಐಡಿಗೆ ಅನುಮತಿಸಿದೆ. ಆದರೆ, ತಾನು ಆದೇಶ ಮಾಡುವವರೆಗೆ ಆತುರದ ನಿರ್ಧಾರ ಮಾಡದಂತೆ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಲಿಮಿಟೆಡ್‌ಗೆ ₹439 ಕೋಟಿ ಸಾಲ ಪಾವತಿಸದೇ ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ಸೌಭಾಗ್ಯಲಕ್ಷ್ಮಿ ಶುಗರ್ಸ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್‌ ಜಾರಕಿಹೊಳಿ ಹಾಗೂ ಮತ್ತಿಬ್ಬರು ನಿರ್ದೇಶಕರಾಗಿದ್ದ ವಸಂತ್‌ ಪಾಟೀಲ್‌ ಮತ್ತು ಶಂಕರ್‌ ಪವಾಡೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠವು ನಡೆಸಿತು. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಸಿಐಡಿ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದಾರೆ.

“ಸಿಐಡಿಯು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬಹುದು. ಆದರೆ, ಹೈಕೋರ್ಟ್‌ ಆದೇಶ ಮಾಡುವವರೆಗೆ ವಿಶೇಷ ನ್ಯಾಯಾಲಯವು ಆರೋಪ ಪಟ್ಟಿ ಸಂಬಂಧ ಆತುರದ ಕ್ರಮಕೈಗೊಳ್ಳಬಾರದು” ಎಂದು ಹೈಕೋರ್ಟ್‌ ನಿರ್ದೇಶಿಸಿದ್ದು, ವಿಚಾರಣೆಯನ್ನು ಜೂನ್‌ 3ಕ್ಕೆ ಮುಂದೂಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರವಿ ಬಿ. ನಾಯಕ್‌ ಅವರು “ಹಾಲಿ ಅರ್ಜಿ ಇತ್ಯರ್ಥವಾಗುವವರೆಗೆ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಅನುಮತಿಸಬಾರದು. ಆರೋಪ ಪಟ್ಟಿ ಸಲ್ಲಿಸಿದರೆ ಈ ಅರ್ಜಿ ಅನೂರ್ಜಿತವಾಗಲಿದೆ. ನಮ್ಮ ಪ್ರಕಾರ ಎಫ್‌ಐಆರ್‌ ಮತ್ತು ಆರೋಪ ಪಟ್ಟಿಯೂ ಊರ್ಜಿತವಾಗುವುದಿಲ್ಲ. ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು, 16 ವರ್ಷಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ” ಎಂದು ಆಕ್ಷೇಪಿಸಿದರು.

Also Read
ಬ್ಯಾಂಕ್‌ಗೆ ₹439 ಕೋಟಿ ವಂಚನೆ ಪ್ರಕರಣ: ತನಿಖೆಗೆ ಸಹಕರಿಸಲು ಶಾಸಕ ರಮೇಶ್‌ ಜಾರಕಿಹೊಳಿಗೆ ಹೈಕೋರ್ಟ್‌ ನಿರ್ದೇಶನ

ಸಿಐಡಿ ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “15.3.2024ರಂದು ಹೈಕೋರ್ಟ್‌ ರಮೇಶ್‌ ಜಾರಕಿಹೊಳಿಗೆ ಸಿಐಡಿಗೆ ತನಿಖೆಗೆ ಸಹಕರಿಸಲು ಆದೇಶಿಸಿತ್ತು. ಈಗ, ಎರಡು ಸಾವಿರ ಪುಟಗಳ ಆರೋಪ ಪಟ್ಟಿ ಸಿದ್ಧವಾಗಿದೆ. ಈ ವಾರಾಂತ್ಯದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದೇವೆ. ಪ್ರಕರಣದಲ್ಲಿ ಜಾರಕಿಹೊಳಿ ಪಾತ್ರವಿದೆ. ಅವರು ಆರೋಪ ಪಟ್ಟಿಯನ್ನು ಪ್ರಶ್ನಿಸಬಹುದಾಗಿದೆ. ಸಂಜ್ಞೇ ಪರಿಗಣಿಸದ ಹೊರತು ಅರ್ಜಿದಾರರಿಗೆ ಆರೋಪ ಪಟ್ಟಿಯ ಪ್ರತಿ ಸಿಗುವುದಿಲ್ಲ” ಎಂದರು.

ಆಗ ಪೀಠವು ಅರ್ಜಿದಾರರಿಗೆ, “ಆರೋಪ ಪಟ್ಟಿಯಲ್ಲಿ ಅರ್ಜಿದಾರರನ್ನು ಉಲ್ಲೇಖಿಸದಿದ್ದರೆ ಈ ಅರ್ಜಿಯು ನಿಮ್ಮ ಪರವಾಗಿರುತ್ತಿತ್ತು. ವಿಚಾರಣಾಧೀನ ನ್ಯಾಯಾಲಯದಲ್ಲಿ ಆತುರದ ನಿರ್ಧಾರ ಕೈಗೊಳ್ಳದಂತೆ ಆದೇಶ ಮಾಡಲಾಗುವುದು. ಅಗತ್ಯ ಬಿದ್ದರೆ ಆರೋಪ ಪಟ್ಟಿ ರದ್ದತಿ ಕೋರಿಕೆಯನ್ನು ಅರ್ಜಿಗೆ ಸೇರ್ಪಡೆ ಮಾಡಬಹುದು” ಎಂದು ಮೌಖಿಕವಾಗಿ ಸಲಹೆ ನೀಡಿತು.

Kannada Bar & Bench
kannada.barandbench.com