ಪಿಲಿಕುಳ ಹೊರತುಪಡಿಸಿ ಬೇರೆಡೆ ಕಂಬಳ ಆಯೋಜನೆಗೆ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ

ಪಿಲಿಕುಳಕದ ನೈಜ ಸ್ಥಾನಮಾನದ ಬಗ್ಗೆ ಸರ್ಕಾರ ವಿವರಣೆ ನೀಡಬೇಕು. ಅದಾದ ಬಳಿಕ ಪಿಲಿಕುಳದಲ್ಲಿ ಕಂಬಳ ಆಯೋಜನೆಯ ವಿಷಯವನ್ನು ಮುಂದಿನ ವಿಚಾರಣೆ ವೇಳೆ ಪರಿಶೀಲಿಸಲಾಗುವುದು ಎಂದ ನ್ಯಾಯಾಲಯ.
Kambala & Karnataka HC
Kambala & Karnataka HC
Published on

ರಾಜ್ಯದ ನಿರ್ದಿಷ್ಟ ಭೌಗೋಳಿಕ ಪ್ರದೇಶ ಅಥವಾ ಕೆಲವು ಜಿಲ್ಲೆಗಳ ಆಚರಣಾ ಸಂಪ್ರದಾಯಗಳು ಇಡೀ ರಾಜ್ಯದ ಸಂಪ್ರದಾಯವಾಗಿರುತ್ತವೆ. ನಿರ್ದಿಷ್ಟ ಸಂಪ್ರದಾಯಗಳನ್ನು ಆಚರಿಸಲಾಗುವ ಕರ್ನಾಟಕದ ಭಾಗಗಳನ್ನು ರಾಜ್ಯಕ್ಕೆ ಸೇರಿದ್ದಲ್ಲ ಎನ್ನಲಾಗುತ್ತದೆಯೇ? ಹಾಗೆ ಹೇಳಿದ್ದಲ್ಲಿ ಅದು ವಿಭಜಕ ಭಾವನೆ ಆದೀತು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ಪಾರಂಪರಿಕ ಸಂಪ್ರದಾಯವಾಗಿರುವ ಕಂಬಳ ಕ್ರೀಡೆಯನ್ನು ರಾ‍ಜ್ಯದ ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ಆಯೋಜನೆ ಮಾಡುವುದನ್ನು ನಿರ್ಬಂಧಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ಪಿಲಿಕುಳ ನಿಸರ್ಗಧಾಮದಲ್ಲಿ (ಜೈವಿಕ ಉದ್ಯಾನವನ) ಉದ್ದೇಶಿತ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ ‘ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ (ಪೇಟಾ) ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ರಾಜ್ಯದ ಬೇರೆ ಕಡೆಗಳಲ್ಲಿ ಕಂಬಳ ಆಯೋಜನೆ ಸಂಬಂಧ ಕಾನೂನು-ನಿಯಮಗಳ ರೀತಿ ರಾಜ್ಯ ಸರ್ಕಾರ ತೀರ್ಮಾನಿಸಬಹುದು ಎಂದು ಮೌಖಿಕವಾಗಿ ಹೇಳಿದೆ. ಅಲ್ಲದೆ, ಇದರ ಬಗ್ಗೆ ವಿವರವಾದ ಆದೇಶ ಹೊರಡಿಸಲಾಗುವುದು ಎಂದೂ ತಿಳಿಸಿದೆ.

ಇದಲ್ಲದೆ, ಪಿಲಿಕುಳ ನಿಸರ್ಗಧಾಮವು ಜೈವಿಕ ಉದ್ಯಾನವನ ಎಂಬುದಾಗಿ ಮಾಸ್ಟರ್ ಪ್ಲಾನ್ ಯೋಜನೆ ಇದ್ದರೆ ಅಲ್ಲಿ ಕಂಬಳ ಆಯೋಜನೆಗೆ ಅವಕಾಶ ಇರುವುದಿಲ್ಲ. ಜೈವಿಕ ಉದ್ಯಾನವನ್ನು ‘ಹಬ್ಬದ ಮೈದಾನವಾಗಿ ಮಾಡಲಾಗದು. ಜೈವಿಕ ಉದ್ಯಾನವನ ಆಗಿದ್ದಲ್ಲಿ ಅಲ್ಲಿ ಕಂಬಳ ಆಯೋಜಿಸಬಹುದು ಎಂಬ ತಜ್ಞರ ವರದಿ ತಪ್ಪಾಗಲಿದೆ. ಆದ್ದರಿಂದ, ಪಿಲಿಕುಳಕದ ನೈಜ ಸ್ಥಾನಮಾನದ ಬಗ್ಗೆ ಸರ್ಕಾರ ವಿವರಣೆ ನೀಡಬೇಕು. ಅದಾದ ಬಳಿಕ ಪಿಲಿಕುಳದಲ್ಲಿ ಕಂಬಳ ಆಯೋಜನೆಯ ವಿಷಯವನ್ನು ಮುಂದಿನ ವಿಚಾರಣೆ ವೇಳೆ ಪರಿಶೀಲಿಸಲಾಗುವುದು ಎಂದು ಹೇಳಿದ ಪೀಠವು ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿತು.

ಅಲ್ಲದೇ ಮೂಲ ವಿಷಯದ ಬಗ್ಗೆ ಯಾವುದೇ ವಾದ ಮಂಡನೆ, ಲಿಖಿತ ಹೇಳಿಕೆಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು ರಾಜ್ಯದ ಬೇರೆ ಕಡೆ ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ಪಿಲಿಕುಳ ಹೊರತುಪಡಿಸಿ ಅಧಿಸೂಚನೆ ಹೊರಡಿಸಬಹುದು ಎಂದು ಸರ್ಕಾರಕ್ಕೆ ಸೂಚಿಸಿತು.

Kannada Bar & Bench
kannada.barandbench.com