ಮತದಾನದ ದಿನ ಮತದಾರರಿಗೆ ಉಚಿತ, ಕಡಿಮೆ ದರದಲ್ಲಿ ಆಹಾರ ವಿತರಿಸಲು ಹೋಟೆಲ್‌ಗಳ ಸಂಘಕ್ಕೆ ಹೈಕೋರ್ಟ್‌ ಅನುಮತಿ

ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘ, ನಿಸರ್ಗ ಗ್ರ್ಯಾಂಡ್‌ನ ಎಸ್‌ ಪಿ ಕೃಷ್ಣರಾಜ್‌ ಮತ್ತು ಕದಂಬ ಫುಡ್‌ಲೈನ್‌ನ ಗುರುರಾಜ್‌ ಹತ್ವಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
Bruhat Bangalore Hotels Association and Karnataka HC
Bruhat Bangalore Hotels Association and Karnataka HC

ಮತದಾನ ಮಾಡುವವರಿಗೆ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ತಮ್ಮ ಖರ್ಚಿನಲ್ಲಿ ಆಹಾರ ವಿತರಿಸಲು ಹೋಟಲ್‌ಗಳಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಅನುಮತಿಸಿದೆ.

ಈ ಸಂಬಂಧ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘ, ನಿಸರ್ಗ ಗ್ರ್ಯಾಂಡ್‌ನ ಎಸ್‌ ಪಿ ಕೃಷ್ಣರಾಜ್‌ ಮತ್ತು ಕದಂಬ ಫುಡ್‌ಲೈನ್‌ನ ಗುರುರಾಜ್‌ ಹತ್ವಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಪುರಸ್ಕರಿಸಿದೆ.

“ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಸ್ಥೆಯು ಚುನಾವಣಾ ಆಯೋಗಕ್ಕೆ ನೀಡಿದ್ದ ಮನವಿಯಂತೆಯೇ ಈ ಬಾರಿಯೂ 10.04.2024 ಮತ್ತು 19.04.2024ರಂದು ಮನವಿ ನೀಡಿತ್ತು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ಉಚಿತ ಆಹಾರ ವಿತರಿಸಲು ನಿರಾಕರಿಸಿ ಪ್ರತಿವಾದಿಗಳು ಅದೇ ಹಾಡು ಆಡಿದ್ದಾರೆ. ಈ ಹಿಂದೆ ಮಾಡಿರುವ ಆದೇಶದ ಹಿನ್ನೆಲೆಯಲ್ಲಿ ಕಳೆದ ಬಾರಿ ಏಕಸದಸ್ಯ ಮತ್ತು ವಿಭಾಗೀಯ ಪೀಠವು 09.05.2023ರಂದು ವಿಧಿಸಿದ ಷರತ್ತುಗಳಿಗೆ ಒಳಪಟ್ಟು ಅರ್ಜಿದಾರರು ಆಹಾರ ವಿತರಿಸಲು ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯ ಹಿಂದಿನ ಆದೇಶವೇನು?

ಮತದಾನ ಮಾಡಿದವರಿಗೆ ಉಚಿತ ಅಥವಾ ಕಡಿಮೆ ದರಕ್ಕೆ ಆಹಾರ ವಿತರಿಸುವ ಹೋಟೆಲ್‌ಗಳಿಂದ ಮತದಾರರು ಆಮಿಷಕ್ಕೆ ಒಳಗಾಗಲಿದ್ದಾರೆ ಎಂಬ ಬಿಬಿಎಂಪಿ ವಾದದಲ್ಲಿ ಹುರುಳಿಲ್ಲ. ಮತದಾರರು ಹೋಟೆಲ್‌ಗೆ ಹೋಗಲೇಬೇಕು ಎಂಬುದಕ್ಕೆ ಯಾವುದೇ ಒತ್ತಡವಿಲ್ಲ. ಹೋಟೆಲ್‌ಗೆ ಹೋಗುವುದು ವ್ಯಕ್ತಿಯೊಬ್ಬರ ಇಚ್ಛೆಯಾಗಿದ್ದು, ಇದರಿಂದ ಆಮಿಷ ಒಡ್ಡಲಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇದರಿಂದ ಇಡೀ ಬೆಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಲಿದೆ ಎಂಬ ವಾದವನ್ನು ಒಪ್ಪಲಾಗದು. ಉಚಿತ ಅಥವಾ ಕಡಿಮೆ ದರದಲ್ಲಿ ಹೋಟೆಲ್‌ ಮಾಲೀಕರು ಆಹಾರ ವಿತರಿಸುವುದಾದರೆ ಅವರು ಹಾಗೆ ಮಾಡಬಹುದು. ನೀತಿ ಸಂಹಿತೆಯ ಪ್ರತಿಯನ್ನು ಅವರಿಗೆ ನೀಡಬೇಕು. ಸಿದ್ಧಪಡಿಸಿದ ಆಹಾರವನ್ನು ಮತದಾನ ಮಾಡಿದ ಬಳಿಕ ಅಥವಾ ಮತದಾನಕ್ಕೂ ಮುನ್ನ ವಿತರಿಸುವುದು ನೀತಿ ಸಂಹಿತೆ ಉಲ್ಲಂಘನೆ ಎಂದು ಎಲ್ಲಿಯೂ ಹೇಳಲಾಗಿಲ್ಲ ಎಂದು ನ್ಯಾಯಾಲಯ 09.05.2023ರ ಆದೇಶದಲ್ಲಿ ಹೇಳಿದೆ.

ಹೀಗಾಗಿ, ಅನುಮತಿ ನೀಡಿ, ಅದನ್ನು ಹಿಂಪಡೆದಿರುವ ಬಿಬಿಎಂಪಿ ನಡೆಯು ಸೂಕ್ತವಾಗಿಲ್ಲ, ಅದಕ್ಕೆ ತಡೆ ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾದರೆ ಬಿಬಿಎಂಪಿಯು ಸಂಬಂಧಿತ ಹೋಟೆಲ್‌ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲು ಸ್ವತಂತ್ರವಾಗಿದೆ. ಯಾವುದೇ ಹೋಟೆಲ್‌ ಸಂಸ್ಥೆಗಳು ಮತ್ತು ಅವುಗಳ ಮಾಲೀಕರು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕ್ರೆಡಿಟ್‌ ಪಡೆಯುವಂತಿಲ್ಲ. ಚುನಾವಣೆಯಲ್ಲಿ ಗುರುತಿಸಿಕೊಂಡಿರುವ ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷದಿಂದ ಯಾವುದೇ ರೀತಿ ನೆರವು ಪಡೆಯುವಂತಿಲ್ಲ. ಮಾಧ್ಯಮಗಳ ಮೂಲಕ ಅವರೇನಾದರೂ ಅಂಥ ಲಾಭ ಪಡೆದಿದ್ದಾರೆ ಎಂಬುದು ತಿಳಿದರೆ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕ್ರಮಕ್ಕೆ ಗುರಿಪಡಿಸಬಹುದಾಗಿದೆ” ಎಂದು ಏಕಸದಸ್ಯ ಪೀಠ ಈ ಹಿಂದೆ ಆದೇಶಿಸಿತ್ತು.


ಇದನ್ನು ಪ್ರಶ್ನಿಸಿ ಬಿಬಿಎಂಪಿಯು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಕೆಲವು ಷರತ್ತು ವಿಧಿಸಿ ಅನುಮತಿಯನ್ನು ಎತ್ತಿ ಹಿಡಿದಿತ್ತು. ಈ ಆದೇಶಗಳು ಅನ್ವಯವಾಗಲಿವೆ ಎಂದು ಹೈಕೋರ್ಟ್‌ ಹೇಳಿದೆ.

Related Stories

No stories found.
Kannada Bar & Bench
kannada.barandbench.com