ದರ್ಶನ್‌ ವೈದ್ಯಕೀಯ ವರದಿ ಪಡೆಯಲು ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ

ದರ್ಶನ್‌ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿದ ವಾರಕ್ಕೆ ಮತ್ತು ಇಂದು ಇನ್ನೊಂದು ವೈದ್ಯಕೀಯ ವರದಿ ಸಲ್ಲಿಸಲಾಗಿದೆ. ಅವೆರಡನ್ನೂ ಪಡೆದು ಪರಿಶೀಲಿಸಿ, ಏನು ಹೇಳಬೇಕು ಎಂದಿದ್ದಿರೋ ಅದನ್ನು ಹೇಳಬಹುದು ಎಂದು ಎಸ್‌ಪಿಪಿಗೆ ಹೇಳಿದ ನ್ಯಾಯಾಲಯ.
Darshan and Pavitra Gowda
Darshan and Pavitra Gowda
Published on

ನಟ ದರ್ಶನ್‌ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಎರಡೂ ವೈದ್ಯಕೀಯ ವರದಿಗಳನ್ನು ಪಡೆದು, ಅವುಗಳನ್ನು ಪರಿಶೀಲಿಸಿದ ನಂತರ ಪ್ರಾಸಿಕ್ಯೂಷನ್‌ ವಾದ ಮಂಡಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌, ಅವರ ಗೆಳತಿ ಮೊದಲ ಆರೋಪಿ ಪವಿತ್ರಾಗೌಡ, 11ನೇ ಆರೋಪಿ ಆರ್‌ ನಾಗರಾಜು, 7ನೇ ಆರೋಪಿ ಅನುಕುಮಾರ್‌ ಅಲಿಯಾಸ್‌ ಅನು ಮತ್ತು 12ನೇ ಆರೋಪಿ ಎಂ ಲಕ್ಷ್ಮಣ್‌ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಕೆಲವು ವರದಿಗಳನ್ನು ನಿರೀಕ್ಷಿಸಲಾಗಿದೆ. ಕೆಲವು ವರದಿಗಳು ಬಂದಿವೆ. ಹೆಚ್ಚುವರಿ ಮತ್ತು ಅಂತಿಮ ವರದಿಯು ನಾಳೆ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಕೆಯಾಗಲಿದೆ. ಅದನ್ನು ಪರಿಶೀಲಿಸಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಬಹುದು” ಎಂದರು.

ಮುಂದುವರಿದು, “ನ್ಯಾಯಾಲಯವು ದರ್ಶನ್‌ಗೆ ಆರು ವಾರಗಳ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ, ಚಿಕಿತ್ಸೆಯ ಅವಧಿಯ ಬಗ್ಗೆ ವೈದ್ಯರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಲಾಗಿತ್ತು. ಇದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೆ, ವರದಿಯಲ್ಲಿನ ವಿವರ ಏನಿದೆ ಎಂಬುದು ನಮಗೆ ತಿಳಿದಿಲ್ಲ. ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿಯಾಗಿದೆಯೇ? ಎಂದು ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂಬ ಮಾಹಿತಿ ನಮಗೆ ಇಲ್ಲ” ಎಂದರು.

ಆಗ ಪೀಠವು “ದರ್ಶನ್‌ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿದ ಒಂದು ವಾರದ ಸಂದರ್ಭದಲ್ಲಿ ಒಂದು ವೈದ್ಯಕೀಯ ವರದಿ ಮತ್ತು ಇಂದು ಇನ್ನೊಂದು ವೈದ್ಯಕೀಯ ವರದಿ ಸಲ್ಲಿಸಲಾಗಿದೆ. ಅವೆರಡನ್ನೂ ಪಡೆದು ಪರಿಶೀಲಿಸಿ, ಏನು ಹೇಳಬೇಕು ಎಂದಿದ್ದೀರೋ ಅದನ್ನು ಹೇಳಬಹುದು” ಎಂದರು.

Also Read
ನಟ ದರ್ಶನ್‌, ಪವಿತ್ರಾಗೌಡ, ಇತರೆ ಮೂವರ ಜಾಮೀನು ಅರ್ಜಿ ವಿಚಾರಣೆ ನ. 21ಕ್ಕೆ ಮುಂದೂಡಿದ ಹೈಕೋರ್ಟ್‌

ಆನಂತರ ಅರ್ಜಿದಾರರ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಮತ್ತು ಇತರರನ್ನು ಕುರಿತು “ವಿಚಾರಣಾಧೀನ ನ್ಯಾಯಾಲಯಕ್ಕೆ ನಾಳೆ ಎಫ್‌ಎಸ್‌ಎಲ್‌ ಅಂತಿಮ ವರದಿ ಸಲ್ಲಿಸಲಿದೆಯಂತೆ. ಅದನ್ನೊಮ್ಮೆ ನೋಡಿ ವಾದ ಮಂಡಿಸಬಹುದು” ಎಂದಿತು. ಕೊನೆಗೆ ವಿಚಾರಣೆಯನ್ನು ನವೆಂಬರ್‌ 26ಕ್ಕೆ ಮುಂದೂಡಿತು.

ಹೈಕೋರ್ಟ್‌ ದರ್ಶನ್‌ ಅವರಿಗೆ ವೈದ್ಯಕೀಯ ವರದಿ ಮಂಜೂರು ಮಾಡಿದ ಬೆನ್ನಿಗೇ ಅವರು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Kannada Bar & Bench
kannada.barandbench.com