ಜೈಲಿನಿಂದಲೇ ಪವರ್‌ ಆಫ್‌ ಅಟಾರ್ನಿ ಕಾರ್ಯಗತಗೊಳಿಸಲು ಶಿವಮೂರ್ತಿ ಮುರುಘಾ ಶರಣರಿಗೆ ಅನುಮತಿಸಿದ ಹೈಕೋರ್ಟ್‌

ಪವರ್ ಆಫ್ ಅಟಾರ್ನಿ ಕಾರ್ಯಗತ ಮಾಡಿದ ನಂತರ ಅದರ ದಾಖಲೆಗಳನ್ನು ತನಿಖಾಧಿಕಾರಿಗಳು ಪಡೆದು, ಅರ್ಜಿದಾರರ ವಿರುದ್ಧದ ಪೋಕ್ಸೊ ಪ್ರಕರಣ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯ.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru
Published on

ಚಿತ್ರದುರ್ಗದ ಮುರುಘ ರಾಜೇಂದ್ರ ಮಠದ ವಿದ್ಯಾಪೀಠಕ್ಕೆ ಸೇರಿದ ಸಂಸ್ಥೆಗಳಿಗೆ ಸಂಬಂಧಿಸಿದ ಪವರ್ ಆಫ್ ಅಟಾರ್ನಿಯನ್ನು ಜೈಲಿನಿಂದಲೇ ಕಾರ್ಯಗತಗೊಳಿಸುವುದಕ್ಕೆ ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಅನುಮತಿಸಿದೆ.

ಪವರ್ ಆಫ್ ಅಟಾರ್ನಿ ಕಾರ್ಯಗತಕ್ಕೆ ಅನುಮತಿ ನೀಡುವ ಸಂಬಂಧ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕ ಸದಸ್ಯ ಪೀಠವು ನಡೆಸಿತು.

ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಪವರ್ ಆಫ್ ಅಟಾರ್ನಿ ಕಾರ್ಯಗತಕ್ಕೆ ಅನುಮತಿ ನೀಡುವಂತೆ ಕೋರಿ ಜೈಲಿನ ಮೇಲ್ವಿಚಾರಕರಿಗೆ ಅರ್ಜಿದಾರರು ಮನವಿ ಸಲ್ಲಿಸಬೇಕು. ಆ ಮನವಿಯನ್ನು ಮೇಲ್ವಿಚಾರಕರು ಪರಿಗಣಿಸಬೇಕು. ಪವರ್ ಆಫ್ ಅಟಾರ್ನಿ ಕಾರ್ಯಗತ ಮಾಡಿದ ನಂತರ ಅದರ ದಾಖಲೆಗಳನ್ನು ತನಿಖಾಧಿಕಾರಿಗಳು ಪಡೆದು, ಅರ್ಜಿದಾರರ ವಿರುದ್ಧದ ಪೋಕ್ಸೊ ಪ್ರಕರಣ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

Also Read
ಮಠ ಹಾಗೂ ವಿದ್ಯಾಪೀಠದ ಚೆಕ್‌ಗಳಿಗೆ ಸಹಿ ಹಾಕಲು ಮುರುಘಾ ಶ್ರಿಗಳಿಗೆ ಅನುಮತಿಸಿದ ಹೈಕೋರ್ಟ್‌

ವಿದ್ಯಾಪೀಠದ ಸಂಸ್ಥೆಗಳ ನೌಕರರು ಮತ್ತು ಇತರೆ ಸಿಬ್ಬಂದಿಗೆ ವೇತನ ವಿತರಿಸುವುದಕ್ಕೆ ಸಂಬಂಧಿಸಿದ ಚೆಕ್‌ಗಳಿಗೆ ಶರಣರು ಅಕ್ಟೋಬರ್‌ 3, 6 ಮತ್ತು 9ರಂದು ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿಯೇ ಸಹಿ ಮಾಡಬಹುದು ಎಂದು ಸೆಪ್ಟೆಂಬರ್‌ 30ರಂದು ಹೈಕೋರ್ಟ್ ಆದೇಶಿಸಿತ್ತು. ಅಲ್ಲದೇ, ಈ ಆದೇಶ ಅಕ್ಟೋಬರ್ ತಿಂಗಳಿಗೆ ವೇತನ ವಿತರಿಸುವುದಕ್ಕೆ ಮಾತ್ರ ಅನ್ವಯಿಸಲಿದೆ. ನೌಕರರಿಗೆ ವೇತನ ಪಾವತಿಸುವುದಕ್ಕೆ ಸಂಬಂಧಿಸಿದ ಚೆಕ್‌ಗಳನ್ನು ಬಿಟ್ಟು ಇತರೆ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ನೀಡಲಾಗಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಆದರೆ, ಪವರ್ ಆಫ್ ಅಟಾರ್ನಿ ಕಾರ್ಯಗತಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡಿರಲಿಲ್ಲ.  ಇದರಿಂದ ಪವರ್ ಆಫ್ ಅಟಾರ್ನಿ ಕಾರ್ಯಗತಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿ ಮುರುಘಾ ಶರಣರ ಪರವಾಗಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಆದೇಶ ಮಾಡಿ ಪೀಠವು ಅರ್ಜಿ ಇತ್ಯರ್ಥಪಡಿಸಿತು.

Kannada Bar & Bench
kannada.barandbench.com