ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಲು ಸರ್ಕಾರಕ್ಕೆ ಅನುಮತಿಸಿದ ಹೈಕೋರ್ಟ್‌

ರಾಜ್ಯ ಸರ್ಕಾರವು ಆಗಸ್ಟ್‌-ಸೆಪ್ಟೆಂಬರ್‌ವರೆಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ವಿಸ್ತರಿಸಲಾಗುವುದು ಎಂದು ತಿಳಿಸಿದೆ. ಹೀಗಾಗಿ, ಮೇ 21ರ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಆದೇಶಿಸಿದ ನ್ಯಾಯಾಲಯ.
Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC
Published on

ರಾಜ್ಯದಲ್ಲಿ ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಆಗಸ್ಟ್‌ ಅಥವಾ ಸೆಪ್ಟೆಂಬರ್‌ವರೆಗೆ ಗಡುವು ವಿಸ್ತರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಅನುಮತಿಸಿದೆ.

ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಿಧಿಸಲಾಗಿರುವ ಗಡುವು ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬಿಎನ್‌ಡಿ ಎನರ್ಜಿ ಲಿಮಿಟೆಡ್‌ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಹೈಕೋರ್ಟ್‌ನ ರಜಾಕಾಲೀನ ಪೀಠವು ಮೇ 21ರಂದು ಎಚ್‌ಎಸ್‌ಆರ್‌ಪಿ ಅಳವಡಿಸದಿರುವುದಕ್ಕೆ ಅರ್ಜಿದಾರರ ವಿರುದ್ಧ ಯಾವುದೇ ದುರುದ್ದೇಶಿತ ಕ್ರಮಕೈಗೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಈಗ ರಾಜ್ಯ ಸರ್ಕಾರವು ಆಗಸ್ಟ್‌-ಸೆಪ್ಟೆಂಬರ್‌ವರೆಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ವಿಸ್ತರಿಸಲಾಗುವುದು ಎಂದು ತಿಳಿಸಿದೆ. ಹೀಗಾಗಿ, ಮೇ 21ರ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಹೈಕೋರ್ಟ್‌ ಅರ್ಜಿದಾರರ ವಿರುದ್ಧ ದುರುದ್ದೇಶಿತ ಕ್ರಮಕೈಗೊಳ್ಳದಂತೆ ಮಾಡಿರುವ ಆದೇಶವು ಇಂದಿಗೆ ಮುಕ್ತಾಯವಾಗಲಿದೆ” ಎಂದರು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ ಅವರು “ಸರ್ಕಾರವು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಿಧಿಸಿರುವ ಗಡುವನ್ನು ಆಗಸ್ಟ್‌ ಅಥವಾ ಸೆಪ್ಟೆಂಬರ್‌ವರೆಗೆ ವಿಸ್ತರಿಸಲು ನಿರ್ಧರಿಸಿದೆ. ಆದರೆ, ರಜಾಕಾಲೀನ ಪೀಠವು ಮೇ 21ರಂದು ದುರುದ್ದೇಶಪೂರಿತ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿದೆ. ಹೀಗಾಗಿ, ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ, ಮೇ 21ರ ಆದೇಶದಲ್ಲಿ ಮಾರ್ಪಾಡು ಮಾಡಬೇಕು. ಪೀಠ ಅನುಮತಿಸಿದರೆ ಒಂದು ವಾರದಲ್ಲಿ ಗಡುವು ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗುವುದು” ಎಂದರು.

ಇದಕ್ಕೆ ಸೋಂಧಿ ಅವರು “ಗಡುವು ವಿಸ್ತರಿಸಿ ಆ ಸಂಬಂಧದ ಅಧಿಸೂಚನೆಯನ್ನು ಪೀಠದ ಮುಂದೆ ಇಡಲು ಸರ್ಕಾರಕ್ಕೆ ಅನುಮತಿಸಬಹುದು. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು” ಎಂದು ಕೋರಿದರು.

ಇದಕ್ಕೆ ಸಮ್ಮತಿಸಿದ ಪೀಠವು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಿಧಿಸಿದ್ದ ಗಡುವು ವಿಸ್ತರಿಸಲು ಅನುಮತಿಸಿ, ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತು. 

Kannada Bar & Bench
kannada.barandbench.com