ಕೆಪಿಟಿಸಿಎಲ್‌ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಾಳೆ ಚುನಾವಣೆ ನಡೆಸಲು ಹೈಕೋರ್ಟ್‌ ಅನುಮತಿ

ಚುನಾವಣೆಯ ಫಲಿತಾಂಶವು ಅರ್ಜಿ ಕುರಿತು ಹೈಕೋರ್ಟ್‌ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿರುವ ಪೀಠವು ಅರ್ಜಿ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದೆ.
High Court of Karnataka
High Court of Karnataka

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಾಳೆ (ಮೇ 23ರಂದು) ನಿಗದಿಯಾಗಿರುವ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಅನುಮತಿಸಿದೆ.

ಚುನಾವಣೆ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಸೂಕ್ತವಾಗಿ ಅನುಸರಿಸುತ್ತಿಲ್ಲ ಎಂದು ಆಕ್ಷೇಪಿಸಿ ಆರ್‌ ಮುರಳೀಧರ ಸೇರಿದಂತೆ ಸಂಘದ 10 ಮಂದಿ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರಿದ್ದ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.

ಚುನಾವಣೆಯ ಫಲಿತಾಂಶವು ಅರ್ಜಿ ಕುರಿತು ಹೈಕೋರ್ಟ್‌ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿರುವ ಪೀಠವು ಅರ್ಜಿ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದೆ.

ಒಮ್ಮೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ನಂತರ ಆ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯಪ್ರವೇಶ/ಹಸ್ತಕ್ಷೇಪ ಮಾಡಬಾರದು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಅದಾಗ್ಯೂ ಚುನಾವಣೆಗೆ ಸಂಬಂಧಿಸಿದ ನಿಯಮಗಳು ಉಲ್ಲಂಘನೆಯಾಗುತ್ತಿದೆ ಎಂಬ ಬಗ್ಗೆ ಅರ್ಜಿದಾರರಿಗೆ ಆಕ್ಷೇಪ ಇದ್ದಲ್ಲಿ ಮತ್ತು ಚುನಾವಣೆಯ ಕಾನೂನುಬದ್ಧತೆಯನ್ನು ಚುನಾವಣೆಯ ಮುಗಿದ ನಂತರವೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕಿರುತ್ತದೆ. ಆದ್ದರಿಂದ, ನಿಗದಿಯಂತೆ ನೌಕರರ ಸಂಘವು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಬಹುದು ಎಂದು ಆದೇಶದಲ್ಲಿ ಪೀಠ ತಿಳಿಸಿದೆ.

ಅರ್ಜಿದಾರರ ಪರ ವಕೀಲರು, ಉದ್ದೇಶಿತ ಚುನಾವಣೆಯನ್ನು ಯಾವುದೇ ಆಧಾರವಿಲ್ಲದೆ ನಡೆಸಲಾಗುತ್ತಿದೆ. ಚುನಾವಣೆ ನಡೆಸಲು ನೌಕರರ ಸಂಘ ಅನುಸರಿಸುತ್ತಿರುವ ನಿಯಮಗಳಿಗೆ ಸಂಬಂಧಿಸಿದ ದಾವೆಯು ಬೆಂಗಳೂರಿನ ಸಿವಿಲ್‌ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಸಂಘಕ್ಕೆ ಚುನಾವಣೆ ನಡೆಸುವುದಾದರೆ, ಚುನಾವಣಾ ಮಾದರಿ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರ ನಡೆಸಬೇಕು ಎಂದು 2024ರ ಫೆಬ್ರವರಿ 28ರಂದು ಹೈಕೋರ್ಟ್‌ ಈ ಹಿಂದೆ ನಿರ್ದೇಶಿಸಿದೆ. ಹೀಗಿದ್ದರೂ ಚುನಾವಣೆಗೆ ಮೇ 18ರಂದು ವೇಳಾಪಟ್ಟಿ ಪ್ರಕಟಿಸಲಾಗಿದೆ ಮತ್ತು ಮೇ 23ರಂದು ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಕೆಪಿಟಿಸಿಎಲ್‌ ನೌಕರರ ಸಂಘದ ಪರ ವಕೀಲರು, ಅರ್ಜಿದಾರರ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ. ಚುನಾವಣೆಯನ್ನು ಕೆಪಿಟಿಸಿಎಲ್‌ ನೌಕರರ ಸಂಘದ ಅಧಿನಿಯಮ ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲಾಗುತ್ತಿದೆ. ಇನ್ನೂ ಚುನಾವಣಾ ಮಾದರಿ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್‌ ಯಾವುದೇ ನಿರ್ದೇಶನ ನೀಡಿಲ್ಲ. ವೇಳಾಪಟ್ಟಿ ಪ್ರಕಟವಾದ ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂಬುದಾಗಿ ಕಾನೂನು ಹೇಳುತ್ತದೆ ಎಂದು ಪೀಠದ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಚುನಾವಣೆ ನಡೆಸಲು ಅನುಮತಿ ನೀಡಿ ಮಧ್ಯಂತರ ಆದೇಶ ಮಾಡಿದೆ.

Kannada Bar & Bench
kannada.barandbench.com