ಅಮೆರಿಕಾದಿಂದ ವಿಸಿ ಮೂಲಕ ಹೇಳಿಕೆ ದಾಖಲಿಸಲು, ಪತಿಯನ್ನು ಪಾಟೀ ಸವಾಲಿಗೆ ಒಳಪಡಿಸಲು ಪತ್ನಿಗೆ ಹೈಕೋರ್ಟ್‌ ಅನುಮತಿ

ಅಮೆರಿಕಾದ ತನ್ನ ನಿವಾಸದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣೆಗೆ ಅರ್ಜಿದಾರೆ ಹಾಜರಾಗಬಹುದು ಎಂದು ನ್ಯಾಯಾಲಯ ಹೇಳಿದೆ.
Karnataka High Court, Couple
Karnataka High Court, Couple
Published on

ಕೌಟುಂಬಿಕ ಕ್ರೌರ್ಯ ಪ್ರಕರಣವೊಂದರ ಸಂಬಂಧ ಅಮೆರಿಕಾದ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬೆಂಗಳೂರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಖ್ಯ ವಿಚಾರಣೆಯಲ್ಲಿ ತನ್ನ ಹೇಳಿಕೆ ದಾಖಲಿಸಲು ಮತ್ತು ಪತಿಯನ್ನು ಪಾಟೀ ಸವಾಲಿಗೆ ಗುರಿಪಡಿಸಲು ಮಹಿಳೆಯೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಅನುಮತಿಸಿದೆ.

ವಿಡಿಯೋ ಕಾನ್ಫರೆನ್ಸ್‌ ಅಧಿನಿಯಮಗಳು-2020ರ ನಿಯಮ 5.3.1 ಸಡಿಲಿಸಿ ಅಮೆರಿಕಾದ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ತನಗೆ ಅನುಮತಿ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿವ ಶಂಕರ್‌ ಮಗದಮ್‌ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

ಅಮೆರಿಕಾ ಮತ್ತು ಭಾರತದ ಸಮಯ ವ್ಯತ್ಯಾಸವಿದೆ. ಭಾರತೀಯ ನ್ಯಾಯಾಲಯಗಳು ಮತ್ತು ಅಮೆರಿಕಾದ ರಾಯಭಾರಿ  ಕಚೇರಿಯ ಕಾರ್ಯನಿರ್ವಹಣಾ ಸಮಯ ಹೊಂದಿಕೆಯಾಗುವುದಿಲ್ಲ. ಇದರಿಂದ ಭಾರತದ ನ್ಯಾಯಾಲಯದ ವಿಚಾರಣೆಗೆ ಅಮೆರಿಕಾ ರಾಯಭಾರಿ/ಕಾನ್ಸುಲೇಟ್‌ ಕಚೇರಿಯ ಮೂಲಕ ಹಾಜರಾಗಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಇದರಿಂದ ರಾಯಭಾರಿ ಕಚೇರಿ ಮೂಲಕವೇ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿ ಹೇಳಿಕೆ ದಾಖಲಿಸುವಂತೆ ಒತ್ತಾಯಿಸುವುದರಿಂದ ಅರ್ಜಿದಾರರೆಗೆ ಅನಗತ್ಯ ತೊಂದರೆ ಉಂಟಾಗಲಿದೆ. ಜೊತೆಗೆ, ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ಹಳಿತಪ್ಪಿಸಲು ಸಹ ಕಾರಣವಾಗುತ್ತದೆ. ಇದರಿಂದ ಅಮೆರಿಕಾದ ತನ್ನ ನಿವಾಸದಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣೆಗೆ ಅರ್ಜಿದಾರೆ ಹಾಜರಾಗಬಹುದು ಎಂದಿದೆ.

ವಿಚಾರಣೆಯ ಸಮಯದಲ್ಲಿ ವಿಡಿಯೊ ಕಾನ್ಫರೆನ್ಸ್‌ ಸಂಪರ್ಕ ಕಡಿತಗೊಳಿಸುವುದಿಲ್ಲ ಅಥವಾ ಹಠಾತ್ತನೆ ಕೊನೆಗೊಳಿಸುವುದಿಲ್ಲ ಎಂಬುದಾಗಿ ದೃಢೀಕರಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿದಾರೆ ಮುಚ್ಚಳಿಕೆ ನೀಡಬೇಕು. ಅರ್ಜಿದಾರೆಯು ತನ್ನ ಮುಚ್ಚಳಿಕೆ ಉಲ್ಲಂಘಿಸಿದರೆ ಸಂಪೂರ್ಣ ಸಾಕ್ಷ್ಯ ತಿರಸ್ಕರಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸ್ವಾತಂತ್ರ್ಯ ಹೊಂದಿರುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಹಿಳೆಯು ತನ್ನ ಪತಿಯ ವಿರುದ್ಧ ಬೆಂಗಳೂರಿನ ವಿವೇಕನಗರ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 498(ಎ)  ಮತ್ತು 377 ಅಡಿಯಲ್ಲಿ ಕ್ರೌರ್ಯ ಹಾಗೂ ಅಸ್ವಾಭಾವಿಕ ಸಂಭೋಗಕ್ಕೆ ಬಲವಂತಪಡಿಸಿದ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಎ ಮತ್ತು 67 (ಖಾಸಗಿ ಫೋಟೊಗಳನ್ನು ತೆಗೆದು ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಹಂಚಿಕೆ ಮಾಡಿದ ಅಪರಾಧ) ಆರೋಪ ಸಂಬಂಧ ದೂರು ದಾಖಲಿಸಿದ್ದರು. ಪ್ರಕರಣದ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ದೂರುದಾರೆ (ಅರ್ಜಿದಾರರು) ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿ, ವಿಡಿಯೊ ಕಾನ್ಫರೆನ್ಸ್‌ ನಿಯಮ 5.3.1 ಪ್ರಕಾರ ಭಾರತದ ಹೊರ ಭೂಪ್ರದೇಶದಲ್ಲಿ ವಾಸವಿರುವವರು (ವಿದೇಶ) ರಾಯಭಾರಿ ಕಚೇರಿ ಮತ್ತು ಕಾನ್ಸುಲೇಟ್‌ ಕಚೇರಿಯಿಂದ ಮಾತ್ರ ತಮ್ಮ ಸಾಕ್ಷ್ಯವನ್ನು ದಾಖಲಿಸಬೇಕು. ಆದರೆ, ಅಮೆರಿಕಾ ಮತ್ತು ಭಾರತ ಭೂಪ್ರದೇಶದ ಸಮಯದಲ್ಲಿ ವ್ಯತ್ಯಾಸವಿದೆ. ಭಾರತದಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸುವ ಸಮಯಕ್ಕೂ ಅಮೆರಿಕಾ ರಾಯಭಾರಿ ಕಚೇರಿ ಅಥವಾ ಕಾನ್ಸುಲೇಟ್‌ ಕಚೇರಿ ಕಾರ್ಯನಿರ್ವಹಣಾ ಸಮಯಕ್ಕೂ ಹೊಂದಿಕೆಯಾಗುವುದಿಲ್ಲ. ಇದರಿಂದ ಆ ಕಚೇರಿಗಳ ಸೌಲಭ್ಯ ಪಡೆಯಲು ನನಗೆ ಸಾಧ್ಯವಾಗುತ್ತಿಲ್ಲ. ಇದರಿಂದ ವಿಡಿಯೊ ಕಾನ್ಫರೆನ್ಸ್‌ ಅಧಿನಿಯಮಗಳ-2020ರ ನಿಯಮ 5.3.1 ಅನ್ನು ಸಡಿಲಿಸಬೇಕು. ಅಮೆರಿಕಾದ ನನ್ನ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಖ್ಯ ವಿಚಾರಣೆ ಮತ್ತು ಪಾಟಿ ಸವಾಲಿಗೆ ಹಾಜರಾಗಿ ನನ್ನ ಹೇಳಿಕೆ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು.

ಪತ್ನಿಯ ಈ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪತಿ, ಪ್ರಕರಣ ವಿಚಾರಣೆಯು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ತನ್ನ ಮನವಿ ಕುರಿತು ಪತ್ನಿಯು ಮೊದಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಬದಲಾಗಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ವಿಚಾರಣೆ ಸಮಯದಲ್ಲಿ ಮುಖ್ಯ ಮತ್ತು ನಿರ್ಣಾಯಕ ವಿಡಿಯೋ ಕಾನ್ಫರೆನ್ಸ್‌ ಸಮಯದಲ್ಲಿ ಹಠಾತ್ತನೆ ಸಂಪರ್ಕ ಕಡಿತಗೊಳಿಸಿ, ವಿಚಾರಣೆಗೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ ಎಂದು ಆಕ್ಷೇಪಿಸಿದ್ದರು.

Kannada Bar & Bench
kannada.barandbench.com