ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ಗೆ ಎಚ್‌ಡಿಕೆ ಬೆದರಿಕೆ ಪ್ರಕರಣ: ನಿವೃತ್ತ ನ್ಯಾ. ಓಕಾ ಮಧ್ಯಸ್ಥಿಕೆದಾರರಾಗಿ ನೇಮಕ

“ಮಧ್ಯಸ್ಥಿಕೆದಾರರು ಎಲ್ಲವನ್ನೂ ನಿಭಾಯಿಸಲಿದ್ದಾರೆ. ಏತಕ್ಕಾಗಿ ಈ ಪ್ರಕರಣವನ್ನು ಅವರಿಗೆ ಕಳುಹಿಸಲಾಗಿದೆ ಎಂಬುದು ಗೊತ್ತಿರುತ್ತದೆ” ಎಂದಿರುವ ಹೈಕೋರ್ಟ್‌.
Justice Abhay S Oka
Justice Abhay S Oka
Published on

ಲೋಕಾಯುಕ್ತ ಎಡಿಜಿಪಿ ಎಂ ಚಂದ್ರಶೇಖರ್‌ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಬೆದರಿಕೆ ಹಾಕಿರುವ ಆರೋಪಕ್ಕೆ  ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಎಸ್ ಓಕಾ ಅವರನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ನೇಮಿಸಿದೆ.

ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ತಮ್ಮ ವಿರುದ್ಧ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಮತ್ತು ಸುರೇಶ್‌ ಬಾಬು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

“ಕಳೆದ ವಿಚಾರಣೆಯಲ್ಲಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದ ನ್ಯಾ. ಎ ಎಸ್‌ ಓಕಾ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸುವುದಾಗಿ ಹೇಳಲಾಗಿತ್ತು. ಇದಕ್ಕೆ ಉಭಯ ಪಕ್ಷಕಾರರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ, ನ್ಯಾ. ಓಕಾ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಲಾಗಿದೆ. ಗೌರವಧನ ಮತ್ತು ವೆಚ್ಚದ ಕುರಿತು ಪಕ್ಷಕಾರರು ನಿರ್ಧರಿಸಿಕೊಳ್ಳಬಹುದು. ಮಧ್ಯಸ್ಥಿಕೆ ಸ್ಥಳ ಮತ್ತು ಇತರೆ ವಿಚಾರಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗುವುದು” ಎಂದು ಪೀಠ ಆದೇಶಿಸಿತು.

ಈ ನಡುವೆ. ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಮಧ್ಯಸ್ಥಿಕೆದಾರರು ಉಭಯ ಪಕ್ಷಕಾರರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ, ಚರ್ಚಿಸಬೇಕು” ಎಂದರು. ಇದಕ್ಕೆ ಪೀಠವು “ಮಧ್ಯಸ್ಥಿಕೆದಾರರು ಎಲ್ಲವನ್ನೂ ನಿಭಾಯಿಸಲಿದ್ದಾರೆ. ಏತಕ್ಕಾಗಿ ಈ ಪ್ರಕರಣವನ್ನು ಅವರಿಗೆ ಕಳುಹಿಸಲಾಗಿದೆ ಎಂಬುದು ಗೊತ್ತಿರುತ್ತದೆ. ಸ್ಥಳವನ್ನು ಅವರು ನಿಗದಿ ಮಾಡುತ್ತಾರೆ. ಇದು ಮತ್ತೆ ಇಲ್ಲಿಗೆ ಬರುವುದಿಲ್ಲ ಎಂಬ ವಿಶ್ವಾಸ ಹೊಂದೋಣ” ಎಂದಿತು.

ವಿಚಾರಣೆಗೂ ಮುನ್ನ, ಪೀಠವು ಕೆಲವು ಪ್ರಕರಣಗಳು ನ್ಯಾಯಾಲಯ ವಿಚಾರಣೆ ನಡೆಸಿಯೇ ಇತ್ಯರ್ಥಪಡಿಸುವ ಅವಶ್ಯತೆ ಇಲ್ಲ. ಸಂಧಾನದ ಮೂಲಕ ಇತ್ಯರ್ಥಪಡಿಸಬಹುದು. ಈ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಬಹುದಾಗಿದೆ. ಆ ಕಾರಣಕ್ಕೆ ಮಧ್ಯಸ್ಥಿಕೆದಾರ ನೇಮಕಕ್ಕೆ ನ್ಯಾಯಾಲಯ ಸಲಹೆ ನೀಡಿತ್ತು ಎಂದಿತು.

ಕೇಂದ್ರ ಎಚ್.ಡಿ.‌ಕುಮಾರ ಸ್ವಾಮಿ ಅವರು‌ ನನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಚಂದ್ರಶೇಖರ್‌, ಸಂಜಯನಗರ ಪೊಲೀಸ್‌ ಠಾಣೆಯಲ್ಲಿ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್‌) ಸೆಕ್ಷನ್‌ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದ) ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಅದನ್ನು ರದ್ದುಪಡಿಸುವಂತೆ ಕೋರಿ ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

Kannada Bar & Bench
kannada.barandbench.com