ಕಾಲ್ತುಳಿತ ಪ್ರಕರಣ: ಹಿರಿಯ ವಕೀಲೆ ಸುಶೀಲಾರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿದ ಹೈಕೋರ್ಟ್‌

ರಾಜ್ಯ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಸ್ಥಿತಿಗತಿ ವರದಿಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಮಧ್ಯಪ್ರವೇಶಿಕೆ ಕೋರಿರುವ ಅರ್ಜಿದಾರರು ವಾದಿಸಿದ್ದಾರೆ. ಈ ವಿಚಾರದಲ್ಲಿ ಅಮಿಕಸ್‌ ಅವರು ನೆರವು ನೀಡಬೇಕು ಎಂದಿರುವ ನ್ಯಾಯಾಲಯ.
ಕಾಲ್ತುಳಿತ ಪ್ರಕರಣ: ಹಿರಿಯ ವಕೀಲೆ ಸುಶೀಲಾರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿದ ಹೈಕೋರ್ಟ್‌
Published on

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿರುವ ದುರ್ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಲ್ಲಿ ನೆರವಾಗಲು ಹಿರಿಯ ವಕೀಲೆ ಎಸ್‌ ಸುಶೀಲಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ಹೈಕೋರ್ಟ್‌ ಸೋಮವಾರ ನೇಮಕ ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಮತ್ತು ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ಅಮಿಕಸ್‌ ಕ್ಯೂರಿ ಸುಶೀಲಾ ಅವರಿಗೆ ರಿಜಿಸ್ಟ್ರಿಯು ರಾಜ್ಯ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಸ್ಥಿತಿಗತಿ ವರದಿಗಳು, ರಿಟ್‌ ಅರ್ಜಿ, ಮಧ್ಯಪ್ರವೇಶಿಕೆ ಕೋರಿರುವ ಅರ್ಜಿಗಳನ್ನು ಎರಡು ದಿನಗಳಲ್ಲಿ ಪೂರೈಕೆ ಮಾಡಬೇಕು ಎಂದು ಆದೇಶಿಸಿತು.

ರಾಜ್ಯ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಸ್ಥಿತಿಗತಿ ವರದಿಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಮಧ್ಯಪ್ರವೇಶಿಕೆ ಕೋರಿರುವ ಅರ್ಜಿದಾರರು ವಾದಿಸಿದ್ದಾರೆ. ಈ ವಿಚಾರದಲ್ಲಿ ಅಮಿಕಸ್‌ ಅವರು ನೆರವು ನೀಡಬೇಕು. ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ನೀಡುವುದು ಸೇರಿ ಜೂನ್‌ 4ರಂದು ನ್ಯಾಯಾಲಯ ಎತ್ತಿರುವ ಪ್ರಶ್ನೆಗಳಿಗೆ ನೆರವು ನೀಡಬೇಕು ಎಂದು ಪೀಠವು ಅಮಿಕಸ್‌ಗೆ ನಿರ್ದೇಶಿಸಿತು.

ಕಳೆದ ವಿಚಾರಣೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಡಿಎನ್‌ಎಗಳಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಈ ಸಂಸ್ಥೆಗಳನ್ನು ಪ್ರತಿನಿಧಿಸುವ ವಕೀಲರ ಉಪಸ್ಥಿತಿಯನ್ನೂ ನ್ಯಾಯಾಲಯವು ದಾಖಲಿಸಿಕೊಂಡಿತು. ಅಂತಿಮವಾಗಿ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿತು.

ಉಳಿದಂತೆ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು ಸಂತ್ರಸ್ತರಿಗೆ ಸರ್ಕಾರ ಘೋಷಿಸಿರುವ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಲು ಆದೇಶಿಸಬೇಕು ಎಂದರು. ಅದಕ್ಕೆ ಪೀಠವು ಸರ್ಕಾರವು ಸ್ವಯಂಪ್ರೇರಿತವಾಗಿ ಪರಿಹಾರ ಘೋಷಿಸಿರಬೇಕು. ಈ ವಿಚಾರದಲ್ಲಿ ಈಗ ಏನನ್ನೂ ಹೇಳುವುದಿಲ್ಲ. ನೀವು ಕ್ರಮಕ್ಕೆ ಮುಂದಾಗಬಹುದು ಎಂದಿತು.

Kannada Bar & Bench
kannada.barandbench.com