ಆರ್‌ಟಿಐ ಕಾಯಿದೆ ಅಡಿ ಬಿಐಎಎಲ್‌ ಸಾರ್ವಜನಿಕ ಪ್ರಾಧಿಕಾರವೇ? ಹೊಸದಾಗಿ ನಿರ್ಣಯಿಸಲು ಮಾಹಿತಿ ಆಯೋಗಕ್ಕೆ ಸೂಚನೆ

ಬಿಐಎಎಲ್ ಮಾಹಿತಿ ಹಕ್ಕು ಆಯೋಗದ ಸೆಕ್ಷನ್ 2 (ಎಚ್) ಅಡಿ ಸಾರ್ವಜನಿಕ ಪ್ರಾಧಿಕಾರ ವ್ಯಾಪ್ತಿಗೆ ಒಳಪಡಲಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ 2013ರಲ್ಲಿ ನೀಡಿರುವ ತೀರ್ಪಿನ ಪ್ರಕಾರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದಿರುವ ಪೀಠ.
Bangalore Airport
Bangalore Airport

ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್‌) ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿ ಸಾರ್ವಜನಿಕ ಪ್ರಾಧಿಕಾರ ಹೌದೇ, ಅಲ್ಲವೇ ಎಂಬ ಬಗ್ಗೆ ಹೊಸದಾಗಿ ತೀರ್ಮಾನ ಕೈಗೊಳ್ಳಬೇಕು ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ವಿಮಾನ ನಿಲ್ದಾಣವನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಮಾಹಿತಿ ಹಕ್ಕು ಆಯೋಗ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಐಎಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.

‘‘ಬಿಐಎಎಲ್ ಮಾಹಿತಿ ಹಕ್ಕು ಆಯೋಗದ ಸೆಕ್ಷನ್ 2 (ಎಚ್) ಅಡಿ ಸಾರ್ವಜನಿಕ ಪ್ರಾಧಿಕಾರ ವ್ಯಾಪ್ತಿಗೆ ಒಳಪಡಲಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಥಾಲಪ್ಪಂ ಸರ್ವೀಸ್ ಕೋ ಆಪ್ ಬ್ಯಾಂಕ್ ನಿಯಮಿತ ಮತ್ತು ಇತರರು ಪ್ರಕರಣದಲ್ಲಿ 2013ರಲ್ಲಿ ನೀಡಿರುವ ತೀರ್ಪಿನ ಪ್ರಕಾರ ಪರಿಶೀಲನೆ ನಡೆಸುವ ಅಗತ್ಯವಿದೆ. ಅದಕ್ಕಾಗಿ ವಿಚಾರವನ್ನು ಮತ್ತೆ ಆಯೋಗಕ್ಕೆ ಹಿಂದಿರುಗಿಸಲಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ.

“ಸುಪ್ರೀಂ ಕೋರ್ಟ್ ಸೆಕ್ಷನ್ 2(ಎಚ್)ಗೆ ಸಂಬಂಧಿಸಿದಂತೆ ಗಣನೀಯ ಮಟ್ಟದ ಹಣಕಾಸು ಒಳಗೊಂಡಿರಬೇಕು ಮತ್ತು ಅದಕ್ಕೆ ಸರ್ಕಾರದಿಂದ ಪ್ರೋತ್ಸಾಹ ಧನ, ಅನುದಾನ, ವಿನಾಯಿತಿಗಳನ್ನು ಪಡೆದಿದೆಯೇ ಎಂಬುದನ್ನು ಗಮನಿಸಬೇಕಾಗಿದೆ. ಹೀಗಾಗಿ, ಆಯೋಗ ಹೊಸದಾಗಿ ಬಿಐಎಎಲ್ ಸಾರ್ವಜನಿಕ ಪ್ರಾಧಿಕಾರ ವ್ಯಾಪ್ತಿಗೆ ಒಳಪಡಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿರ್ಧರಿಸಬೇಕು” ಎಂದು ಪೀಠವು ಆದೇಶಿಸಿದೆ.

ಬಿಐಎಎಲ್ ಕಂಪೆನಿ ಕಾಯಿದೆ 1956 ಅಡಿ ಸ್ಥಾಪನೆಯಾಗಿರುವ ಒಂದು ಕಂಪೆನಿಯಾಗಿದ್ದು, ಅದರ ಉದ್ದೇಶ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದಾಗಿದೆ. ಅದಕ್ಕಾಗಿ ನಾಲ್ವರು ಪಾಲುದಾರರಾದ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ), ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ), ಸಿಮೆನ್ಸ್ ಪ್ರಾಜೆಕ್ಟ್ ವೆಂಚರ್ಸ್‌ ಜಿಎಂಬಿಎಚ್, ಫ್ಲುಗಪೆನ್ ಜುರಿಚ್ ಎಜಿ, ಲಾರ್ಸೆನ್ ಅಂಡ್ ಟುಬ್ರೋ ಮತ್ತು ಬಿಐಎಎಲ್ ನಡುವೆ ಒಪ್ಪಂದ ಏರ್ಪಟ್ಟಿತ್ತು.

ಆ ಕಂಪೆನಿ ಬಗ್ಗೆ ಮಾಹಿತಿ ನೀಡುವಂತೆ ಬೆನ್ಸನ್ ಐಸಾಕ್ ಎಂಬುವರು ಆರ್‌ಟಿಐ ಕಾಯಿದೆ ಸೆಕ್ಷನ್ 4(1)(ಬಿ)ರ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ತಿರಸ್ಕರಿಸಿದ್ದ ಕಾರಣ ಅವರು ಆರ್‌ಟಿಐ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಪೂರ್ಣಪೀಠವು ಬಿಐಎಎಲ್ ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ ಎಂದು ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ 2010ರಲ್ಲಿ ಮಾನ್ಯ ಮಾಡಿ, ಆರ್‌ಟಿಐ ಆಯೋಗದ ಆದೇಶವನ್ನು ಊರ್ಜಿತಗೊಳಿಸಿತ್ತು. 

Kannada Bar & Bench
kannada.barandbench.com