ನಾಗರಿಕ ಸೇವಾ ಮಂಡಳಿ ಚಾಲ್ತಿಯಲ್ಲಿರುವ ರಾಜ್ಯಗಳ ವಿವರ ಒದಗಿಸಲು ಹೈಕೋರ್ಟ್‌ ನಿರ್ದೇಶನ

ಐಎಎಸ್ ಅಧಿಕಾರಿಗಳನ್ನು ಆಡಳಿತಾತ್ಮಕ ಮೇಲಾಧಿಕಾರಿಗಳು, ರಾಜಕಾರಣಿಗಳು ಹಾಗೂ ಇತರರನ್ನು ನ್ಯಾಯಬಾಹಿರ ಹಾಗೂ ನಿರಂಕುಶ ಒತ್ತಡದಿಂದ ರಕ್ಷಿಸಬೇಕು ಎಂದು ಕೋರಿರುವ ಅರ್ಜಿದಾರರು.
Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC
Published on

ನಿರ್ದಿಷ್ಟ ಸ್ಥಳ ಮತ್ತು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಐಎಎಸ್ ಅಧಿಕಾರಿಗಳ ಕನಿಷ್ಠ ಸೇವಾವಧಿಯನ್ನು ನಿಗದಿಪಡಿಸುವ ಮತ್ತು ಕರ್ತವ್ಯ ನಿರ್ವಹಣೆಯ ವೇಳೆ ಅವರ ಹಿತಕಾಯುವ ಉದ್ದೇಶ ಹೊಂದಿದ, ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ದೇಶದ ಬೇರೆ ಯಾವ ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ ಎಂಬ ಮಾಹಿತಿಯನ್ನು ಒದಗಿಸುವಂತೆ ಅರ್ಜಿದಾರರೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಸೂಚಿಸಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಕರ್ನಾಟಕದಲ್ಲಿ ನಾಗರಿಕ ಸೇವಾ ಮಂಡಳಿ ರಚಿಸಬೇಕು ಹಾಗೂ ನಾಗರಿಕರ ಸೇವಾ ಅಧಿಕಾರಿಗಳ ಕನಿಷ್ಠ ಸೇವಾವಧಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತರೂ ಆದ ಬೆಂಗಳೂರಿನ ರಿಷಬ್ ಟ್ರಕ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ನಚಿಕೇತ್ ಜೋಶಿ ಅವರು “ಐಎಎಸ್ ಅಧಿಕಾರಿಗಳನ್ನು ಆಡಳಿತಾತ್ಮಕ ಮೇಲಾಧಿಕಾರಿಗಳು, ರಾಜಕಾರಣಿಗಳು ಹಾಗೂ ಇತರರ ನ್ಯಾಯಬಾಹಿರ ಹಾಗೂ ನಿರಂಕುಶ ಒತ್ತಡದಿಂದ ರಕ್ಷಿಸಬೇಕು. ಅವರುಗಳು ಯಾವುದೇ ಮೌಖಿಕ ಸೂಚನೆ, ಆದೇಶ, ಅಭಿಪ್ರಾಯ ಅಥವಾ ಪ್ರಸ್ತಾವಗಳನ್ನು ಆಧರಿಸಿ ಸೇವೆ ಸಲ್ಲಿಸುವಂತಾಗಬಾರದು ಎಂದು ಪೀಠಕ್ಕೆ ವಿವರಿಸಿದರು.

“ಈ ನಿಟ್ಟಿನಲ್ಲಿ ಮಾರ್ಗಸೂಚಿ ನಿಗದಿಪಡಿಸಲು ಕೇಂದ್ರ ಸರ್ಕಾರದಂತೆ ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳೂ ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ರಚಿಸಬೇಕು ಎಂದು 2013ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದಕ್ಕೆ 2021ರಲ್ಲಿ ಹೈಕೋರ್ಟ್‌ ನಿರ್ದೇಶನವೂ ಇದೆ. ಆದರೂ, ನಾಗರಿಕ ಸೇವಾ ಮಂಡಳಿಯನ್ನು ರಾಜ್ಯದಲ್ಲಿ ಇನ್ನೂ ರಚಿಸಿಲ್ಲ. ಆದ್ದರಿಂದ, ಇದರ ರಚನೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದೇಶದ ಬೇರೆ ಯಾವ ರಾಜ್ಯಗಳಲ್ಲಿ ನಾಗರಿಕ ಸೇವಾ ಮಂಡಳಿ ರಚಿಸಲಾಗಿದೆ” ಎಂದು ನಚಿಕೇತ್‌ ಅವರನ್ನು ಪ್ರಶ್ನಿಸಿತು.

ಆಗ ನಚಿಕೇತ್‌ ಅವರು “ಇತ್ತೀಚೆಗೆ ಪಂಜಾಬ್ ರಾಜ್ಯದಲ್ಲಿ ಸಿಎಸ್‌ಬಿ ರಚಿಸಲಾಗಿದೆ. ಉಳಿದ ರಾಜ್ಯಗಳ ಬಗೆಗಿನ ಮಾಹಿತಿ ಸದ್ಯಕ್ಕಿಲ್ಲ” ಎಂದು ಉತ್ತರಿಸಿದರು.

“ಹಾಗಾದರೆ, ಬೇರೆ ಯಾವ ರಾಜ್ಯಗಳಲ್ಲಿ ಸಿಎಸ್‌ಬಿ ರಚಿಸಲಾಗಿದೆ, ಸದ್ಯದ ವಸ್ತುಸ್ಥಿತಿ ಏನಿದೆ ಎಂಬ ಬಗ್ಗೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿ” ಎಂದು ಸೂಚಿಸಿದ ಪೀಠ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com