ಅತ್ಯಾಚಾರ ಮಾಡಿಸಿದ್ದ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ಬಂಧಿಸದಂತೆ ಹೈಕೋರ್ಟ್‌ ಆದೇಶ

“ಮುನಿರತ್ನ ವಿರುದ್ಧ 16 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಹೀಗಾಗಿ, ರಕ್ಷಣೆ ನೀಡಬಾರದು” ಎಂದು ಆಕ್ಷೇಪಿಸಿದ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ.
BJP MLA V Muniratna and Karnataka HC
BJP MLA V Muniratna and Karnataka HC
Published on

ಮಧ್ಯವಯಸ್ಸಿನ ಮಹಿಳೆಯೊಬ್ಬರ ಮೇಲೆ ತನ್ನ ಸಹಚರರಿಂದ ಕಣ್ಣೆದುರೇ ಅತ್ಯಾಚಾರ ಮಾಡಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ತನಿಖೆಗೆ ಸಹಕರಿಸಬೇಕು ಮತ್ತು ಪೊಲೀಸರು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ ಆರೋಪಿಗಳಾಗಿರುವ ವಸಂತ್‌ ಕುಮಾರ್‌, ಚನ್ನಕೇಶವ ಮತ್ತು ಕಮಲ್‌ ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಲಾಗಿದೆ. ಕಾಲಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಲಾಗದು. ಹೀಗಾಗಿ, ಮುನಿರತ್ನ ಅವರಿಗೂ ಬೇರೆ ಆರೋಪಿಗಳಿಗೆ ನೀಡಲಾಗಿರುವ ರಕ್ಷಣೆಯನ್ನು ವಿಸ್ತರಿಸಲಾಗುವುದು. ಜೂನ್‌ 17ರಂದು ಪ್ರಕರಣವನ್ನು ಅಂತಿಮವಾಗಿ ನಿರ್ಧರಿಸಲಾಗುವುದು ಎಂದು ಹೇಳಿ, ನ್ಯಾಯಾಲಯ ವಿಚಾರಣೆ ಮುಂದೂಡಿತು.

ಸಂತ್ರಸ್ತೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಅವರು “ವಿಚಾರಣಾಧೀನ ನ್ಯಾಯಾಲಯವು ಮುನಿರತ್ನ ಮತ್ತು ಇತರ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ, ಕಸ್ಟಡಿಗೆ ತನಿಖೆ ನಡೆಸಬೇಕಾದ ಅಗತ್ಯವಿದೆ. ಮುನಿರತ್ನ ವಿರುದ್ಧ 16 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ. ಹೀಗಾಗಿ, ರಕ್ಷಣೆ ನೀಡಬಾರದು” ಎಂದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಿ ಎಸ್‌ ಪ್ರದೀಪ್‌ ಅವರು “ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ, ಬಂಧಿಸುವುದಿಲ್ಲ ಎಂಬ ವಾಗ್ದಾನವನ್ನು ಹಿಂಪಡೆಯಲಾಗುವುದು” ಎಂದರು.

ಮುನಿರತ್ನ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಲಾಗುವುದು. ಹೀಗಾಗಿ, ಬಂಧನಕ್ಕೆ ಅವಕಾಶ ನೀಡಬಾರದು. ಇದೆಲ್ಲವೂ ರಾಜಕೀಯ ಪ್ರೇರಿತ ಪ್ರಕರಣಗಳಾಗಿವೆ” ಎಂದರು.

ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯು ಆರ್‌ಎಂಸಿ ಯಾರ್ಡ್‌ನಲ್ಲಿ ದಾಖಲಿಸಿರುವ ದೂರಿನಲ್ಲಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಕೆಲಸ ಮಾಡಿದ್ದರಿಂದ ಮುನಿರತ್ನ ಕುಮ್ಮಕ್ಕಿನಿಂದ ಟಿ ದಾಸರಹಳ್ಳಿಯಲ್ಲಿ ತಾನು ವ್ಯಭಿಚಾರ ದಂಧೆ ನಡೆಸುತ್ತಿದ್ದೇನೆ ಎಂದು ನಕಲಿ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ಆನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದೆನು. 2020ರಲ್ಲಿ ಮುನಿರತ್ನ ಬಿಜೆಪಿಗೆ ಸೇರ್ಪಡೆಯಾಗಿದ್ದು, ಆತನ ಬೆಂಬಲಿಗರಾದ ಕಮಲ್‌, ಚನ್ನಕೇಶವ, ವಸಂತ್‌ ಮತ್ತು ಇತರರು ತನ್ನ ವಿರುದ್ಧ ಕೊಲೆ ಯತ್ನ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲೂ ಜಾಮೀನು ಪಡೆದಿದ್ದೇನೆ. 11.06.2023ರ ರಾತ್ರಿ ಏಳು ಗಂಟೆ ವೇಳೆಗೆ ತಾನು ಮನೆಯಲ್ಲಿದ್ದ ಸಂದರ್ಭದಲ್ಲಿ ಕಮಲ್‌ ಮತ್ತು ವಸಂತ್‌ ತನ್ನ ಮನೆಗೆ ಬಂದು ಮುನಿರತ್ನರನ್ನು ಭೇಟಿ ಮಾಡುವಂತೆ ಪುಸಲಾಯಿಸಿದ್ದರು. ಇದರಂತೆ ಮುನಿರತ್ನ ಮನೆಗೆ ಭೇಟಿ ನೀಡಿದ್ದು, ತನ್ನನ್ನು ಆಶ್ರಯ ನಗರ ರಾಣಿ ಎಂದು ಸಂಬೋಧಿಸಿ ಆಹ್ವಾನಿಸಿದ್ದು, ಆನಂತರ ಮನೆಯ ಎರಡನೇ ಮಹಡಿಗೆ ಕರೆದೊಯ್ದು ವಸಂತ್‌ ಮತ್ತು ಚನ್ನಕೇಶವ ಅವರು ವಿವಸ್ತ್ರಗೊಳಿಸಿ ರಾತ್ರಿ 9.30 ರ ವೇಳೆಗೆ ಬೇರೊಬ್ಬ ವ್ಯಕ್ತಿಯನ್ನು ಕರೆಸಿ, ಚುಚ್ಚು ಮದ್ದನ್ನು ಕೊಡಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲ ಅರ್ಜಿದಾರರು ತಾನು ಬದುಕಿರುವವರೆಗೂ ಅನುಭವಿಸುತ್ತೇನೆ ಎಂದಿದ್ದರು. 14.01.2025ರಂದು ತನಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವಾಣಿ ವಿಲಾಸ ಆಸ್ಪತ್ರೆ ತೆರಳಿ ಪರಿಶೀಲಿಸಲಾಗಿ ಇಡಿಆರ್‌ ವೈರಸ್‌ನಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದ್ದರು. ಆನಂತರ ಬೇರೊಬ್ಬ ವೈದ್ಯರನ್ನು ಕಂಡಿದ್ದು, ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದು, ಆನಂತರ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದರು.

ಇದನ್ನು ಆಧರಿಸಿ ಆರೋಪಿಗಳ ವಿರುದ್ದ ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 376-ಡಿ, 270, 323, 354, 504, 506, 509 ಜೊತೆಗೆ ಸೆಕ್ಷನ್‌ 34 ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಲಾಗಿದೆ.

Kannada Bar & Bench
kannada.barandbench.com