

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಗೇಮಿಂಗ್ ಕಂಪೆನಿ ವಿನ್ಜೊ ಸಹ ಸಂಸ್ಥಾಪಕರಾದ ಸೌಮ್ಯ ಸಿಂಗ್ ರಾಥೋಡ್ ಮತ್ತು ಪಾವನ್ ನಂದ ಅವರ ಜಾಮೀನು ನಿರ್ಧರಿಸುವಾಗ ಜಾರಿ ನಿರ್ದೇಶನಾಲಯವು ಶೋಧ ಮತ್ತು ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳುವಾಗ ಮಾಡಿಕೊಂಡಿರುವ ವಿಡಿಯೋ ರೆಕಾರ್ಡಿಂಗ್ ಪರಿಶೀಲಿಸಿ ನಿರ್ಧರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಜಾರಿ ನಿರ್ದೇಶನಾಲಯವು ಕಾನೂನಿಗೆ ವಿರುದ್ಧವಾಗಿ ಶೋಧ ಮತ್ತು ಜಫ್ತಿ ಮಾಡಿ, ಆರೋಪಿಗಳ ಹೇಳಿಕೆ ದಾಖಲಿಸಿ, ಪಂಚನಾಮೆ ನಡೆಸಿದೆ. ಹೀಗಾಗಿ ಇದನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಕೋರಿ ವಿನ್ಜೊ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ಪಕ್ಷಕಾರರ ವಾದ ಆಲಿಸಿದ ನ್ಯಾಯಪೀಠವು “ವಿಚಾರಣಾಧೀನ ನ್ಯಾಯಾಲಯವು ವಿನ್ಜೊ ಸಹ ಸಂಸ್ಥಾಪಕರ ಜಾಮೀನು ನಿರ್ಧರಿಸುವಾಗ ಜಾರಿ ನಿರ್ದೇಶನಾಲಯವು ಶೋಧ ನಡೆಸುವಾಗ, ಹೇಳಿಕೆ ದಾಖಲಿಸುವಾಗ ಮಾಡಿಕೊಂಡಿರುವ ಸಿಸಿಟಿವಿ ದೃಶ್ಯಾವಳಿ ಸಲ್ಲಿಸಲು ಅರ್ಜಿದಾರರು ಕೋರಬಹುದು. ಇದನ್ನು ಮತ್ತು ಲಭ್ಯ ಇರುವ ದಾಖಲೆಗಳನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳ ಜಾಮೀನು ನಿರ್ಧರಿಸಬಹುದು” ಎಂದು ಆದೇಶಿಸಿತು. ಅಲ್ಲದೇ, ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ, ವಿನ್ಜೊ ಪರ ಹಿರಿಯ ವಕೀಲರು “ವಿನ್ಜೊ ದೆಹಲಿಯ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯವು ನವೆಂಬರ್ 18ರಿಂದ 22ರವರೆಗೆ ಶೋಧ ನಡೆಸಿದೆ. ಆ ಸಂದರ್ಭದಲ್ಲಿ ವಿನ್ಜೊ ಸಹ ಸಂಸ್ಥಾಪಲರಾದ ಸೌಮ್ಯ ಸಿಂಗ್ ರಾಥೋಡ್ ಮತ್ತು ಪಾವನ ನಂದಾ ಅವರನ್ನು ಐದು ದಿನ ತನ್ನ ಮುಂದೆ ಇರಿಸಿಕೊಂಡಿತ್ತು. ಬೆಳಿಗ್ಗೆ 9 ರಿಂದ ರಾತ್ರಿ 10ರವರೆಗೂ ಅವರಿಗೆ ಬಿಡುವು ನೀಡದೇ ಕಿರುಕುಳ ನೀಡಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ನಿರ್ಬಂಧಿಸಲಾಗಿತ್ತು. ಕೊನೆಗೆ ಸಂಸ್ಥೆಯ ಡಿವಿಆರ್ ಕೊಂಡೊಯ್ಯಲಾಗಿದೆ. ಜಾರಿ ನಿರ್ದೇಶನಾಲಯವು ತನ್ನ ಕಡೆಯಿಂದ ಇಡೀ ಪ್ರಕ್ರಿಯೆಯ ವಿಡಿಯೋ ರೆಕಾರ್ಡಿಂಗ್ ಮಾಡಿಲ್ಲ. ಇದು ಬಿಎನ್‌ಎಸ್ ಸೆಕ್ಷನ್ 105ರ ಉಲ್ಲಂಘನೆಯಾಗಿದೆ. ಆನಂತರ ಅರ್ಜಿದಾರರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದು, ನವೆಂಬರ್ 26ರಂದು ಬೆಂಗಳೂರಿನ ಇ ಡಿ ಕಚೇರಿಗೆ ವಿಚಾರಣೆಗೆ ಹಾಜರಾದಾಗ ಅವರನ್ನು ಬಂಧಿಸಲಾಗಿದೆ” ಎಂದು ಆಕ್ಷೇಪಿಸಿದರು.
ಜಾರಿ ನಿರ್ದೇನಾಲಯ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್.ರಾವ್ ಅವರು “ಅಧಿಕಾರಿಗಳಿಂದ ಸೂಚನೆ ಪಡೆದು ವಾದಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಆಲ್ಗಾರಿದಂ ಕೈಚಳ ಮತ್ತು ಡಿಜಿಟಲ್ ವಂಚನೆ ಆರೋಪದ ಹಿನ್ನೆಲೆಯಲ್ಲಿ ಕಂಪನಿಯ ಸೌಮ್ಯ ಸಿಂಗ್ ರಾಥೋಡ್ ಮತ್ತು ಪಾವನ್ ನಂದಾ ಅವರನ್ನು ಜಾರಿ ನಿರ್ದೇಶನಾಲಯವು ನವೆಂಬರ್ 26ರಂದು ಬಂಧಿಸಿದ್ದು, ಅವರ ಕಸ್ಟಡಿಯು ಶನಿವಾರಕ್ಕೆ ಕೊನೆಗೊಂಡಿತ್ತು. ಹೀಗಾಗಿ, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಚಾರಣಾಧೀನ ನ್ಯಾಯಾಲಯವು ನಾಳೆ ನಡೆಸಲಿದೆ.
ಪ್ರಕರಣದ ಹಿನ್ನೆಲೆ: ವಿನ್ಜೋ ವಿರುದ್ಧ ಆಲ್ಗಾರಿದಮ್ ತಿರುಚಿ, ಡಿಜಿಟಲ್ ರೂಪದಲ್ಲಿ ಗ್ರಾಹಕರ ಹಣ ವಂಚನೆ ಮಾಡಿರುವ ಆರೋಪದ ಸಂಬಂಧ ಬೆಂಗಳೂರು (ಪಶ್ಚಿಮ ಸೆನ್ ಠಾಣೆ), ರಾಜಸ್ಥಾನ, ದೆಹಲಿ ಮತ್ತು ಗುರುಗ್ರಾಮಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದು, ಇದರ ಆಧಾರದಲ್ಲಿ 6.11.2025ರಂದು ಇ ಡಿಯು ಇಸಿಐಆರ್ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 18 ರಿಂದ 22ರವರೆಗೆ ದೆಹಲಿಯ ಎರಡು ವಿನ್ಜೊ ಕಚೇರಿ, ಸೌಮ್ಯ ಅವರ ನಿವಾಸ ಹಾಗೂ ಉದ್ಯೋಗಿಯಾಗಿರುವ ಧೀರಜ್ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಇದರ ಬೆನ್ನಿಗೇ ನವೆಂಬರ್ 22ರಂದು ಸೌಮ್ಯ ಮತ್ತು ಪಾವನ್‌ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ನವೆಂಬರ್ 26ರಂದು ಅವರು ವಿಚಾರಣೆಗೆ ಹಾಜರಾದಾಗ ಬಂಧಿಸಲಾಗಿತ್ತು.
ವಿನ್ಜೊ ಅಪ್ಲಿಕೇಶನ್ ಮೂಲಕ ಮುಗ್ಧರನ್ನು ಆಟ ಆಡುವಂತೆ ಪ್ರೇರೇಪಿಸಿ, ಆನಂತರ ಸಿಸ್ಟಂ ಸಹಾಯದಿಂದ ಅವರನ್ನು ವಂಚಿಸುವ ಜಾಲ ಇದಾಗಿದೆ. 2024ರ ಮೇನಿಂದ 2025ರ ಆಗಸ್ಟ್ ನಡುವೆ 177 ಕೋಟಿ ರೂಪಾಯಿ ಅಪರಾಧದ ಗಳಿಕೆ ಪತ್ತೆಯಾಗಿದ್ದು, ಸಿಂಗಾಪುರ ಮತ್ತು ಅಮೆರಿಕಾದಲ್ಲಿರುವ ವಿನ್ಜೊ ಪಾಲುದಾರ ಕಂಪನಿಗಳಿಗೆ ಸುಮಾರು 400 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ. ಇದುವರೆಗೆ ಒಟ್ಟಾರೆ 500 ಕೋಟಿ ಆಸ್ತಿ ಜಫ್ತಿ ಮಾಡಲಾಗಿದೆ. ಇದೊಂದು ದೊಡ್ಡ ಜಾಲ ಎಂದು ಇ ಡಿ ಆರೋಪಿಸಿದೆ.