ಹಂಪಿಯ ಉಗ್ರ ನರಸಿಂಹ, ಬಡವಿಲಿಂಗ ದೇವಾಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಮಾಡಿದ್ದ ಭೂಸ್ವಾಧೀನ ರದ್ದುಪಡಿಸಿದ ಹೈಕೋರ್ಟ್‌

ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿ ಬಡ ರೈತರ ಜೀವನಾಡಿಯಾಗಿದೆ. ಈ ಪ್ರಕರಣದಲ್ಲಿ ಭೂಸ್ವಾಧೀನವು ದುರುದ್ದೇಶದಿಂದ ಕೂಡಿದೆ ಎಂದ ನ್ಯಾಯಾಲಯ.
Karnataka HC (Dharwad Bench) & Justice Sachin Shankar Magadum
Karnataka HC (Dharwad Bench) & Justice Sachin Shankar Magadum

ಹಂಪಿಯಲ್ಲಿರುವ ಉಗ್ರ ನರಸಿಂಹ ಮತ್ತು ಬಡವಿಲಿಂಗ ದೇವಾಲಯಗಳ ಸಂರಕ್ಷಿತ ಸ್ಮಾರಕಗಳ ಬಳಿ ಸುಂದರೀಕರಣ ಮತ್ತು ಮೂಲಸೌಕರ್ಯ ಸುಧಾರಣೆಗಾಗಿ ಸುಮಾರು ಏಳು ಎಕರೆ ಭೂ ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ರದ್ದುಗೊಳಿಸಿದೆ.

ಹೊಸಪೇಟೆ ತಾಲ್ಲೂಕಿನ ಕೃಷ್ಣಾಪುರ ಮತ್ತು ಕಮಲಾಪುರ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ 2007ರಲ್ಲಿ ನಿಡಶೇಷಿ ವೀರಣ್ಣ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ ಭೂ ಸ್ವಾಧೀನ ಮಾಡಿಕೊಂಡು 2006ರ ಏಪ್ರಿಲ್‌ 5ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.

“ಸರ್ಕಾರ ಸ್ವಾಧೀನಪಡಿಸಿಕೊಂಡಿರುವ ಭೂಮಿ ಬಡ ರೈತರ ಜೀವನಾಡಿಯಾಗಿದೆ. ಈ ಪ್ರಕರಣದಲ್ಲಿ ಭೂಸ್ವಾಧೀನವು ದುರುದ್ದೇಶದಿಂದ ಕೂಡಿದೆ. ಹಾಗಾಗಿ ಆಕ್ಷೇಪಿತ ಅಧಿಸೂಚನೆಗಳು ರದ್ದು ಮಾಡಲು ಅರ್ಹವಾಗಿವೆ" ಎಂದು ನ್ಯಾಯಾಲಯ ಹೇಳಿದೆ.

“ಭೂ ಸ್ವಾಧೀನ ಕಾಯಿದೆ 1894 ರ ಸೆಕ್ಷನ್ 5ಎ ಅನ್ವಯ ಆಕ್ಷೇಪಣೆಗಳ ವಿಚಾರಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಅದನ್ನು ರದ್ದುಪಡಿಸಿ ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ತುರ್ತು ನಿಬಂಧನೆಯನ್ನು ಅನ್ವಯಿಸುವ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವು ದುರುದ್ದೇಶದಿಂದ ಕೂಡಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ಭೂ ಸ್ವಾಧೀನವನ್ನು ಕಾನೂನುಬಾಹಿರ ಎಂದಿದೆ.

ತುರ್ತು ಷರತ್ತುಗಳಂತಹ ಕಾನೂನು ವ್ಯಾಪ್ತಿಯನ್ನು ವಿಧಿಸುವಾಗ ಅಧಿಕಾರಿಗಳು ಕಾನೂನಿನ ಇತರೆ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಬದ್ಧವಾಗಿರಬೇಕು. ಪ್ರಸ್ತುತ ಪ್ರಕರಣದಲ್ಲಿ, ತುರ್ತು ಷರತ್ತನ್ನು ಅನ್ವಯ ಮಾಡಿರುವುದಕ್ಕೆ ರಾಜ್ಯ ಸರ್ಕಾರದ ಬಳಿ ಸಾಬೀತು ಮಾಡುವ ಯಾವುದೇ ಅಂಶಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಭೂ ಸ್ವಾಧೀನ ಸಂಬಂಧ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು, ಈ ಭೂಸ್ವಾಧೀನ ಕಾಯಿದೆ 1894ರ ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ಸರ್ಕಾರಕ್ಕೆ ನೀಡಲಾದ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಚಲಾಯಿಸಲಾಗಿಲ್ಲ ಎಂದು ಅತೃಪ್ತಿಪಡಿಸಿದೆ.

ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯು ಶಿಲ್ಪಗಳು ಮತ್ತು ಕೆತ್ತನೆಗಳ ಅಸ್ತಿತ್ವವನ್ನು ಪರಿಶೀಲಿಸಲು ಮತ್ತು ಈ ಸ್ಮಾರಕಗಳ ಸುತ್ತಲೂ ಸೌಂದರ್ಯೀಕರಣ ಮತ್ತು ಮೂಲಸೌಕರ್ಯ ಸುಧಾರಣೆಗೆ ಈ ಭೂಮಿ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿತ್ತು. ಆದರೆ, ರಾಜ್ಯ ಸರ್ಕಾರ ಸ್ಮಾರಕಗಳಿಗೆ ಪ್ರವೇಶ ಒದಗಿಸಲು ಭೂ ಸ್ವಾಧೀನ ಅಗತ್ಯವಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಪ್ರಕರಣದ ಹಿನ್ನೆಲೆ: ಕೃಷ್ಣಾಪುರ ಮತ್ತು ಕಮಲಾಪುರ ಗ್ರಾಮಗಳಲ್ಲಿನ ವಿವಿಧ ಸರ್ವೇ ನಂಬರ್‌ಗಳಲ್ಲಿ ರೈತರಿಗೆ ಸೇರಿದ  ಭೂಮಿಯನ್ನು ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯಿದೆ 1894ರ ಅಡಿ ಸ್ವಾಧೀನಪಡಿಸಿಕೊಂಡಿತ್ತು. ದೇವಾಲಯಗಳಿಗೆ ಪ್ರವೇಶ ದೊರಕಿಸಿಕೊಡಲು ಈ ಸ್ವಾಧೀನ ಅತ್ಯಗತ್ಯ ಎಂದು ಸರ್ಕಾರ ಹೇಳಿತ್ತು.

ಅರ್ಜಿದಾರರು ತಾವು ಆ ಕೃಷಿ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಆದರೆ ಸರ್ಕಾರ ಏಕಪಕ್ಷೀಯವಾಗಿ ಸ್ವಾಧೀನ ನಿರ್ಧಾರ ಕೈಗೊಂಡಿದೆ. ಕನಿಷ್ಠ ತಮ್ಮ ಆಕ್ಷೇಪಣೆಗಳನ್ನೂ ಸಹ ಕೇಳಿಲ್ಲ. ಯಾವುದೇ ತುರ್ತು ಇಲ್ಲದಿದ್ದರೂ ಸರ್ಕಾರ ತುರ್ತು ಸಂದರ್ಭ ಎಂದು ಹೇಳಿ ನಿಯಮದ ಪ್ರಕಾರ ಆಕ್ಷೇಪಣೆಗಳಿಗೂ ಅವಕಾಶ ನೀಡದೆ ಕಾನೂನು ಬಾಹಿರ ಕ್ರಮ ಕೈಗೊಂಡಿದೆ ಎಂದು ಆಕ್ಷೇಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

Attachment
PDF
Nidasheshi Veeranna & others Vs State of Karnataka.pdf
Preview
Kannada Bar & Bench
kannada.barandbench.com