ಅಧಿಕೃತ ವೀಸಾ, ಪಾಸ್‌ಪೋರ್ಟ್‌ ಹೊಂದಿಲ್ಲದ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ: ಹೈಕೋರ್ಟ್‌ ಕಳವಳ

“ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂತಹುದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ?” ಎಂದ ಹೈಕೋರ್ಟ್.‌
ಅಧಿಕೃತ ವೀಸಾ, ಪಾಸ್‌ಪೋರ್ಟ್‌ ಹೊಂದಿಲ್ಲದ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯ: ಹೈಕೋರ್ಟ್‌ ಕಳವಳ
Published on

“ಮಾನ್ಯತೆ ಹೊಂದಿದ ವೀಸಾ, ಪಾಸ್‌ಪೋರ್ಟ್‌ ಇಲ್ಲದೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯವಿದೆ” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ತಮ್ಮನ್ನು ಅಕ್ರಮವಾಗಿ ಬಂಧಿಸಿದ್ದು ಬಿಡುಗಡೆ ಮಾಡಬೇಕೆಂದು ಕೋರಿ ನೈಜೀರಿಯಾದ  ಇಮೆಕಾ ಜೇಮ್ಸ್‌ ಐವೊಬಾ ಅಲಿಯಾಸ್ ಆಸ್ಟಿನ್‌ ನೊಸೊ ಐವೊಬಾ ಮತ್ತು ವುಡೆರಿಕ್‌ ಫಿಡೆಲಿಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಯಾವುದೇ ವಿದೇಶಿ ವ್ಯಕ್ತಿಯು ಮಾನ್ಯತೆ ಹೊಂದಿದ ವೀಸಾ ಇಲ್ಲದೆ ಅಥವಾ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಕಚೇರಿ (ಎಫ್‌ಆರ್‌ಆರ್‌ಒ) ಕಚೇರಿಯಲ್ಲಿ ನೋಂದಾಯಿಸದೆ ಅವಧಿ ಮೀರಿ ತಂಗಿದ್ದರೆ ಮತ್ತು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳು ಸಂವಿಧಾನದ 22ನೇ ವಿಧಿಯ ಅಡಿಯಲ್ಲಿ ಬಂಧನಕ್ಕೆ ಸಂಬಂಧಿಸಿದಂತೆ ರಕ್ಷಣೆ ಪಡೆಯಬಹುದೇ ಎಂಬುದನ್ನು ಪರಾಮರ್ಶಿಸಿ ಸೂಕ್ತ ಆದೇಶ ಹೊರಡಿಸಲಾಗುವುದು” ಎಂದು ತಿಳಿಸಿತು. ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, “ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ಮಹಾನಗರದಲ್ಲಿ ಸಾಕಷ್ಟು ವಿದೇಶಿ ಪ್ರಜೆಗಳು ಠಿಕಾಣಿ ಹೂಡಿದ್ದಾರೆ ಎಂದರೆ ಹೇಗೆ? ಇಂತಹುದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಕರ್ತವ್ಯ ಲೋಪ ಎಸಗಿದಂತಲ್ಲವೇ?” ಎಂದು ಪೀಠವು ಪ್ರಶ್ನಿಸಿತು.

“ಮಾನ್ಯತೆ ಹೊಂದಿದ ವೀಸಾ ಇಲ್ಲದೆ ಅಥವಾ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸದೆ ಬೆಂಗಳೂರು ನಗರದಲ್ಲಿ ಅವಧಿ ಮೀರಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಅಗತ್ಯ ಕ್ರಮಗಳನ್ನು ಮುಂದಿನ ವಿಚಾರಣೆಯಲ್ಲಿ ಹಾಜರುಪಡಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣದಲ್ಲಿ ಸೇರ್ಪಡೆಯಾಗಿರುವ ಎಫ್‌ಆರ್‌ಆರ್‌ಒ ಪ್ರತಿನಿಧಿಸಿದ್ದ ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು “ಅರ್ಜಿದಾರರು 2015ರಲ್ಲಿ ಭಾರತಕ್ಕೆ ವ್ಯಾಪಾರ ವೀಸಾದಲ್ಲಿ ಬಂದಿದ್ದಾರೆ ಮತ್ತು ವಿಭಿನ್ನ ವೀಸಾಗಳಲ್ಲಿ ಉಳಿದುಕೊಂಡಿದ್ದಾರೆ. ಇಮೆಕಾ ಜೇಮ್ಸ್‌, ಸೋಗು ಹಾಕಿಕೊಂಡು ಮತ್ತೊಬ್ಬರ ಹೆಸರಿನಲ್ಲಿ ಅನುಮತಿಸಲಾದ ವೀಸಾ ಹೊಂದಿದ್ದು ಗಡುವನ್ನು ಮೀರಿ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾರೆ” ಎಂದು ವಿವರಿಸಿದರು.

“ಅರ್ಜಿದಾರರ ವಿರುದ್ಧ ಈಗಾಗಲೇ ಮಾದಕ ದ್ರವ್ಯ ನಿಗ್ರಹ ಕಾಯಿದೆ (ಎನ್‌ಡಿಪಿಎಸ್‌) ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಇಬ್ಬರ ವಿರುದ್ಧ 400 ಗ್ರಾಂ ಎಂಡಿಎಂಎ ಮತ್ತು ಕೊಕೇನ್ ಮಾರಾಟ ಮಾಡಿದ ಆರೋಪವಿದೆ. ಆದರೆ, ಅವರು ಭಾರತದ ಸಂವಿಧಾನದ ಅಡಿಯಲ್ಲಿ ನೈಜೀರಿಯನ್ ಪ್ರಜೆಗಳಾಗಿ ನಮ್ಮ ಹಕ್ಕನ್ನು ಉಲ್ಲಂಘಿಸಿಲಾಗಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದರು.

“ಅರ್ಜಿದಾರರು ಮಾತ್ರವಲ್ಲದೆ ಇನ್ನೂ ಸಾಕಷ್ಟು ವಿದೇಶಿಯರು ಅಧಿಕೃತ ವೀಸಾ ಇಲ್ಲದೆ ನಗರದಲ್ಲಿ ಉಳಿದುಕೊಂಡಿದ್ದಾರೆ ಮತ್ತು ತನಿಖೆಗೆ ಅಗತ್ಯವಿರುವ ಅವಧಿಯನ್ನು ಮೀರಿದ್ದಾರೆ. ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ನಿಯಮಗಳ ಪ್ರಕಾರ, ದೇಶದೊಳಗೆ ಪ್ರವೇಶಿಸುವ ವಿದೇಶಿ ಪ್ರಜೆ 14 ದಿನಗಳ ಒಳಗಾಗಿ ಎಫ್‌ಆರ್‌ಆರ್‌ಒ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಆದರೆ, ಈ ಅರ್ಜಿದಾರರು ಇವತ್ತಿಗೂ ತಮ್ಮನ್ನು ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ. ಎಫ್ಆರ್‌ಆರ್‌ಒ ನೋಂದಣಿ ಇಲ್ಲದೆ ನಗರದಲ್ಲಿ ಉಳಿದುಕೊಂಡಿರುವ ಈ ವಿದೇಶಿ ಪ್ರಜೆಗಳನ್ನು ನಿಭಾಯಿಸುವಲ್ಲಿ ರಾಜ್ಯದ ಕಡೆಯಿಂದಲೂ ಕರ್ತವ್ಯ ಲೋಪವಾಗಿದೆ” ಎಂದರು.

Kannada Bar & Bench
kannada.barandbench.com