ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಮಾನಹಾನಿ ಲೇಖನ ಪ್ರಕಟ: ಸ್ಥಳೀಯ ಪತ್ರಿಕೆಯ ಸಂಪಾದಕ ಅಪರಾಧಿ ಎಂದ ಹೈಕೋರ್ಟ್‌

ವ್ಯಕ್ತಿಯ ವ್ಯಕ್ತಿತ್ವಕ್ಕೆ ಹಾನಿ ಮಾಡಲು ಆಧಾರರಹಿತ ಆರೋಪ ಮಾಡುವುದು ಖಂಡಿತವಾಗಿಯೂ ಮಾನಹಾನಿಯಾಗಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ಆದೇಶವು ವಜಾಕ್ಕೆ ಅರ್ಹವಾಗಿದೆ ಎಂದು ಹೈಕೋರ್ಟ್‌ ಆದೇಶ ಮಾಡಿದೆ.
Karnataka High Court
Karnataka High Court
Published on

ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಲಂಚದ ಆರೋಪ ಮಾಡಿ ಮಾನಹಾನಿ ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಹಲೋ ಮೈಸೂರು ಪತ್ರಿಕೆಯ ಸಂಪಾದಕ ಟಿ ಗುರುರಾಜ್‌ ಅವರನ್ನು ಅಪರಾಧಿ ಎಂದಿರುವ ಕರ್ನಾಟಕ ಹೈಕೋರ್ಟ್‌ ಈಚೆಗೆ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಮಾನಹಾನಿ ಪ್ರಕರಣದಲ್ಲಿ ಗುರುರಾಜ್‌ ಅವರನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ದೂರುದಾರರಾದ ಕೆ ಆರ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎನ್‌ ಸುರೇಶ್‌ ಬಾಬು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ರಾಚಯ್ಯ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

Justice S Rachaiah
Justice S Rachaiah

“ಅಧಿಕಾರಿಯ ವಿರುದ್ಧ ಆರೋಪ ಮಾಡಲಾಗಿದ್ದು, ಅವರ ವಿರುದ್ಧದ ಯಾವುದೇ ಆರೋಪವನ್ನು ಸಾಬೀತುಪಡಿಸಲು ಸಾರ್ವಜನಿಕರ ದೂರನ್ನು ಹಾಜರುಪಡಿಸದೇ ಇರುವುದು ಮಾನಹಾನಿಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಐಪಿಸಿ ಸೆಕ್ಷನ್‌ 500ರ ಅಡಿ ಗುರುರಾಜ್‌ ಅಪರಾಧಿಯಾಗಿದ್ದು, ಆರು ತಿಂಗಳು ಸರಳ ಜೈಲು ಶಿಕ್ಷೆ ಮತ್ತು 2,000 ರೂಪಾಯಿ ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್‌ 501 ಅಡಿ ಅಪರಾಧಕ್ಕೆ ಆರು ತಿಂಗಳು ಜೈಲು ಮತ್ತು 2,000 ರೂಪಾಯಿ ದಂಡ ವಿಧಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

“ಸುರೇಶ್‌ ಬಾಬು ಅಧಿಕೃತ ಕರ್ತವ್ಯದ ಭಾಗವಾಗಿ ಆರೋಪಿ ಗುರುರಾಜ್‌ ಅವರನ್ನು ಬಂಧಿಸಿ ಸಕ್ಷಮ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಗುರುರಾಜ್‌ ಅವರು ಸುರೇಶ್‌ ಬಾಬು ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದರ ಭಾಗವಾಗಿ 03.08.2004ರಂದು ಮಾನಹಾನಿ ಲೇಖನ ಪ್ರಕಟಿಸಿದ್ದರು. ಆನಂತರವೂ ಗುರುರಾಜ್‌ ಕೆಲವು ಆರೋಪ ಮಾಡಿದ್ದರಿಂದ ಸುರೇಶ್‌ ಬಾಬು ಅವರು ಕುಟುಂಬ ಮತ್ತು ಸಂಬಂಧಿಗಳು ಹಾಗೂ ಸಾರ್ವಜನಿಕರ ದೃಷ್ಟಿಯಲ್ಲಿ ಕುಬ್ಜರಾಗಿದ್ದರು” ಎಂದು ಆದೇಶದಲ್ಲಿ ಹೇಳಲಾಗಿದೆ.

ಹೀಗಾಗಿ, ಮೇಲ್ಮನವಿದಾರ ಸುರೇಶ್‌ ಬಾಬು ಅವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಗುರುರಾಜ್‌ ವಿರುದ್ಧ ದಾವೆ ಹೂಡಿದ್ದರು. ವಿಚಾರಣಾಧೀನ ನ್ಯಾಯಾಲಯವು ಸಾಕ್ಷಿ ಮತ್ತು ದಾಖಲೆಗಳನ್ನು ಪರಿಗಣಿಸಿ ಗುರುರಾಜ್‌ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುರೇಶ್‌ ಬಾಬು ಮೇಲ್ಮನವಿ ಸಲ್ಲಿಸಿದ್ದು, ಗುರುರಾಜ್‌ ಆಧಾರರಹಿತ ಆರೋಪ ಮಾಡಿದ್ದಾರೆ. ಇದನ್ನು ಪರಿಗಣಿಸುವಲ್ಲಿ ವಿಚಾರಣಾಧೀನ ನ್ಯಾಯಾಲಯ ಎಡವಿದ್ದು, ಪ್ರಶ್ನಾರ್ಹ ಆದೇಶ ಮಾಡಿದೆ. ಇದು ಬದಿಗೆ ಸರಿಸಲು ಸೂಕ್ತವಾಗಿದೆ” ಎಂದು ವಾದಿಸಲಾಗಿತ್ತು.

“ತಮ್ಮ ಮಾಲೀಕತ್ವದ ಹಲೋ ಮೈಸೂರು ಪತ್ರಿಕೆಯಲ್ಲಿ ಪ್ರಕಟಿಸಿರುವ ಲೇಖನವು ಯಾವುದೇ ರೀತಿಯಲ್ಲೂ ಮಾನಹಾನಿಕಾರವಾಗಿಲ್ಲ. ವ್ಯವಸ್ಥೆ ಸರಿಪಡಿಸಲು ದಾರಿತಪ್ಪಿದ ಅಧಿಕಾರಿಗಳಿಗೆ ಸಂದೇಶ ನೀಡಲಾಗಿದೆ” ಎಂದು ಆದೇಶವನ್ನು ಗುರುರಾಜ್‌ ಸಮರ್ಥಿಸಿದ್ದರು.

ಸುರೇಶ್‌ ಬಾಬು ಅವರು ಒಂದಂಕಿ ಲಾಟರಿ ಆಡಲು ಸಹಕರಿಸಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೇ, ಚಾಮುಂಡಿ ಬೆಟ್ಟದ ಸಮೀಪ ವಾಹನಗಳನ್ನು ಪಾರ್ಕ್‌ ಮಾಡಲು ಅವಕಾಶ ಮಾಡಿಕೊಟ್ಟು ಪಾರ್ಕಿಂಗ್‌ ಏಜೆಂಟ್‌ಗಳಿಂದ ಕಾನೂನುಬಾಹಿರವಾಗಿ ಲಂಚ ಪಡೆದಿದ್ದಾರೆ ಎಂದು ಗುರುರಾಜ್‌ ಆರೋಪಿಸಿದ್ದಾರೆ. ಹಲೋ ಮೈಸೂರು ಪತ್ರಿಕೆಯು ಗುರುರಾಜ್‌ ಅವರಿಗೆ ಸೇರಿದ್ದು, ಈ ವಿಚಾರದ ಕುರಿತು ಸಕ್ಷಮ ಪ್ರಾಧಿಕಾರವು ಸುರೇಶ್‌ ಬಾಬು ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪೀಠ ಹೇಳಿದೆ.

ಲೇಖನವು ಮಾನಹಾನಿ ರೂಪ ಹೊಂದಿದೆ ಎಂಬುದು ಸಾಬೀತಾದ ನಂತರ ಅದನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪ್ರಕಟಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಪತ್ರಿಕೆಯ ಮಾಲೀಕರಿಗೆ ವರ್ಗಾವಣೆಯಾಗಲಿದೆ. “ಲಭ್ಯವಿರುವ ಮೌಖಿಕ ಮತ್ತು ದಾಖಲೆಯಲ್ಲಿನ ಸಾಕ್ಷಿಗಳನ್ನು ಓದಿದರೆ ಸುರೇಶ್‌ ಬಾಬು ಅವರ ಘನತೆಗೆ ಚ್ಯುತಿ ಉಂಟು ಮಾಡುವ ಪದಗಳನ್ನು ಬಳಕೆ ಮಾಡಲಾಗಿದೆ. ವ್ಯಕ್ತಿತ್ವಕ್ಕೆ ಹಾನಿ ಮಾಡಲು ಆಧಾರರಹಿತ ಆರೋಪ ಮಾಡುವುದು ಖಂಡಿತವಾಗಿಯೂ ಮಾನಹಾನಿಯಾಗಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ತೀರ್ಪು ಬದಿಗೆ ಸರಿಸಲು ಅರ್ಹವಾಗಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

Attachment
PDF
S N Suresh babu Vs T Gururaj
Preview
Kannada Bar & Bench
kannada.barandbench.com