ಹೆರಿಗೆ ರಜೆ ನೀಡಿ ಗುತ್ತಿಗೆ ಉದ್ಯೋಗಿ ಸೇವೆ ವಜಾ ಮಾಡಿದ ಸರ್ಕಾರದ ನಡೆಗೆ ಹೈಕೋರ್ಟ್‌ ಕೆಂಡ; ಮರು ನಿಯುಕ್ತಿಗೆ ಆದೇಶ

ವಿಜಯಪುರ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಅರ್ಜಿದಾರೆಗೆ ದಾವೆಯ ಖರ್ಚಿನ ಭಾಗವಾಗಿ 25 ಸಾವಿರ ರೂಪಾಯಿ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
High Court of Karnataka, Dharwad Bench
High Court of Karnataka, Dharwad Bench
Published on

“ಸರ್ಕಾರಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಪ್ರಜೆಗಳಿಗೆ ಕಲ್ಪಿಸಲಾಗಿರುವ ಸಾಂವಿಧಾನಿಕ ಮತ್ತು ಶಾಸನಬದ್ಧ ಹಕ್ಕುಗಳ ಮೇಲೆ ರಾಜ್ಯ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ವ್ಯವಸ್ಥಿತ ಉದ್ದೇಶಪೂರ್ವಕ ದೌರ್ಜನ್ಯದಲ್ಲಿ ತೊಡಗಿಸಿಕೊಂಡಿವೆ” ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಕಿಡಿಕಾರಿದೆ.

ವಿಜಯಪುರ ಜಿಲ್ಲೆಯ ಹೂವಿನಹಡಗಲಿಯ ಚಾಂದ್‌ಬೀ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದ್ದು, ಅರ್ಜಿದಾರೆಗೆ ಅತಾರ್ಕಿಕವಾಗಿ ಹೆರಿಗೆ ರಜೆ ನಿರಾಕರಿಸುವ ಮೂಲಕ ಅಕ್ರಮವಾಗಿ ಅವರಿಗೆ ಮನೆದಾರಿ ತೋರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.

“ಚಾಂದ್‌ಬೀ ಅವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದು, ದಶಕಗಳ ಕಾಲ ಅವರನ್ನು ದುಡಿಸಿಕೊಂಡಿದ್ದರೂ ಅವರಿಗೆ ಶಾಸನಬದ್ಧ ರಕ್ಷಣೆ ಒದಗಿಸದೇ ಕೈಬಿಡಲಾಗಿದೆ. ಹಲವು ರಾಜ್ಯಗಳ ಇಂಥ ನಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮತ್ತು ಹಲವು ಹೈಕೋರ್ಟ್‌ಗಳು ಸರಣಿ ಎಚ್ಚರಿಕೆ ಮತ್ತು ಅಸಮಾಧಾನ ಸೂಚಿಸಿದ್ದರೂ ಹಾಲಿ ಪ್ರಕರಣವು ರಾಜ್ಯ ಸರ್ಕಾರದ ನಾಚಿಕೆಗೇಡಿನ ನಡೆಗೆ ಸ್ಪಷ್ಟ ಉದಾಹರಣೆಯಾಗಿದೆ” ಎಂದು ನ್ಯಾಯಾಲಯವು ಕಿಡಿಕಾರಿದೆ.

ಮಾನವ ಸಂಪನ್ಮೂಲ ಸೇವೆ ಒದಗಿಸುವ ಸಂಸ್ಥೆಯ ಮೂಲಕ ವಿಜಯಪುರ ಜಿಲ್ಲೆಯ ಹೂವಿನಹಡಗಲಿಯ ರೈತ ಸಂಪರ್ಕ ಕೇಂದ್ರಕ್ಕೆ 2014ರ ಮೇನಲ್ಲಿ ಕೃಷಿ ಇಲಾಖೆಯು 30 ವರ್ಷದ ಬಳಿಗಾರ್‌ ಚಾಂದ್‌ಬೀ ಅವರನ್ನು ನೇಮಕ ಮಾಡಿತ್ತು. 2023ರ ಮೇನಲ್ಲಿ ಸಂಬಂಧಿತ ಇಲಾಖೆಯು 2023ರ ಆಗಸ್ಟ್‌ 31ರವರೆಗೆ ಚಾಂದ್‌ಬೀಗೆ ಹೆರಿಗೆ ರಜೆ ಮಂಜೂರು ಮಾಡಿತ್ತು. ಬಳಿಕ ಕರ್ತವ್ಯಕ್ಕೆ ಹಾಜರಾದ ಚಾಂದ್‌ಬೀ ಅವರಿಗೆ ತನ್ನ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೇ, ತಾನು ನೇರ ಸರ್ಕಾರಿ ಸಿಬ್ಬಂದಿಯಾಗಿಲ್ಲ. ಹೀಗಾಗಿ, ತಾನು ಹೆರಿಗೆ ರಜೆಗೆ ಅರ್ಹರಲ್ಲ ಎಂದು ಸರ್ಕಾರ ತಿಳಿಸಿತ್ತು. ಈ ವಿಚಾರ ಚಾಂದ್ಬೀ ಅವರಲ್ಲಿ ಆಘಾತ ಮತ್ತು ನಿರಾಸೆ ಉಂಟು ಮಾಡಿದ್ದರಿಂದ ಅವರ ಹೈಕೋರ್ಟ್‌ ಕದತಟ್ಟಿದ್ದರು.

ಈ ಸಂಬಂಧ ದಾಖಲೆ ಪರಿಶೀಲಿಸಿದ ನ್ಯಾಯಾಲಯವು “ಚಾಂದ್‌ಬೀ ಅವರನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ ನೇಮಕ ಮಾಡಿದ್ದರೂ ಆಕೆಯ ಗುತ್ತಿಗೆ ಕರಾರನ್ನು ನವೀಕರಿಸದೆ ಹತ್ತು ವರ್ಷ ಅಂದರೆ ಆಕೆ ಹೆರಿಗೆ ರಜೆ ಪಡೆಯುವವರೆಗೂ ಮುಂದುವರಿಸಲಾಗಿದೆ. ಅಲ್ಲದೇ ಆಕೆ ರಜೆಗೆ ತೆರಳುವುದಕ್ಕೂ ಮುನ್ನ ನಿರಂತರವಾಗಿ ವೇತನ ಪಾವತಿಸಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.

“ಚಾಂದ್‌ಬೀ ಅವರ ಸೇವೆಯನ್ನು ಹತ್ತು ವರ್ಷಗಳ ಕಾಲ ಅನಿರ್ಬಂಧಿತವಾಗಿ ಪಡೆದಿರುವ ಸರ್ಕಾರವು ವಿಚಿತ್ರವೆಂದರೆ 2014ರಲ್ಲಿ ಮಾನವ ಸೇವೆ ಕಲ್ಪಿಸಿದ್ದ ಏಜೆನ್ಸಿ ಅಥವಾ ವಾರ್ಷಿಕ ಟೆಂಡರ್‌ನಲ್ಲಿ ಭಾಗವಾಹಿಸಿದ್ದ ಬೇರೆ ಯಾವುದೇ ಏಜೆನ್ಸಿಯೂ ಆಕೆಯ ಒಪ್ಪಂದವನ್ನು ನವೀಕರಿಸಿಲ್ಲ ಎಂದು ಹೇಳಿದೆ. ಹಾಗಿದ್ದರೆ, 2023ರವರೆಗೆ ಹೊಸ ಏಜೆನ್ಸಿಯ ಮೂಲಕ ಆಕೆ ನೇಮಕವಾಗದಿದ್ದರೂ ಆಕೆಯನ್ನು ಸೇವೆಯಲ್ಲಿ ಏಕೆ ಮುಂದುವರಿಸಲಾಗಿತ್ತು” ಎಂದು ಹೈಕೋರ್ಟ್‌ ಆಶ್ಚರ್ಯ ವ್ಯಕ್ತಪಡಿಸಿದೆ. ಇದರರ್ಥ ಆಕೆಯ ಸೇವೆಯನ್ನು ನೇರವಾಗಿ ಮುಂದುವರಿಸಲಾಗಿದೆಯೇ ವಿನಾ ಯಾವುದೇ ಏಜೆನ್ಸಿಯ ಮೂಲಕವಲ್ಲ ಎಂದಿದೆ.

“ಚಾಂದಬೀ ಅವರ ನೇಮಕಾತಿ ಮತ್ತು ಪ್ರತಿ ವರ್ಷ ಬೇರೆ ಏಜೆನ್ಸಿಗಳ ಮೂಲಕ ಒಪ್ಪಂದ ನವೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದೆ. ಇದಕ್ಕೆ ಸೂಕ್ತ ವಿವರಣೆ ನೀಡಲು ರಾಜ್ಯ ಸರ್ಕಾರದ ಪ್ರಾಧಿಕಾರಗಳು ಸೋತಿರುವುದು ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರೆ ಚಾಂದ್‌ಬೀ ಮತ್ತು ಸರ್ಕಾರದ ನಡುವೆ ನೇರ ಉದ್ಯೋಗಿ-ಉದ್ಯೋಗದಾತ ಸಂಬಂಧವಿದೆ. ಸಂಬಂಧಿತ ಹುದ್ದೆಗೆ ಸಾಮಾನ್ಯ ನೇಮಕಾತಿ ಮಾಡುವವರೆಗೆ ಆಕೆಯನ್ನು ಹಿಂದಿನ ಹುದ್ದೆಗೆ ಮರು ನೇಮಕ ಮಾಡಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಹಾಗೆಯೇ ಅರ್ಜಿದಾರೆಯು ಹೆರಿಗೆ ಸೌಲಭ್ಯ ಕಾಯಿದೆ 1961ರ ಅನ್ವಯ ಬಾಕಿ ವೇತನಕ್ಕೆ ಅರ್ಹವಾಗಿದ್ದಾರೆ” ಎಂದು ಆದೇಶಿಸಿದೆ.

ಅಲ್ಲದೇ, ವಿಜಯಪುರ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಉಪನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಅರ್ಜಿದಾರೆಗೆ ದಾವೆಯ ಖರ್ಚಿನ ಭಾಗವಾಗಿ 25 ಸಾವಿರ ರೂಪಾಯಿ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅರ್ಜಿದಾರೆಯ ಪರವಾಗಿ ವಕೀಲ ರೋಷನ್‌ ಸಾಹೇಬ್‌ ಚಬ್ಬಿ ವಾದಿಸಿದ್ದರು.

Attachment
PDF
Baligar Chandbi Vs State of Karnataka.pdf
Preview
Kannada Bar & Bench
kannada.barandbench.com