ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ: ರಾಮಕೃಷ್ಣ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಭವಿಷ್ಯದಲ್ಲಿ ಅಪರಾಧಿಗೆ ವಿಧಿಸಬಹುದಾದ ಗರಿಷ್ಠ ಜೈಲು ಶಿಕ್ಷಾ ಅವಧಿಯ ಅರ್ಧಕ್ಕಿಂತಲೂ ಹೆಚ್ಚು ಅವಧಿಯವರೆಗೆ ವ್ಯಕ್ತಿಯನ್ನು ಬಂಧನದಲ್ಲಿ ಮುಂದುವರಿಸಲು ಬಿಎನ್‌ಎಸ್‌ಎಸ್‌ ಸೆಕ್ಷನ್‌ 479(1)ರಲ್ಲಿ ಅಧಿಕಾರ ನೀಡಲಾಗಿದೆ ಎಂದಿರುವ ನ್ಯಾಯಾಲಯ.
Justice H P Sandesh
Justice H P Sandesh
Published on

ನಕಲಿ ದಾಖಲೆ ಸೃಷ್ಟಿಸಿ ಠೇವಣಿದಾರರಿಗೆ ₹1,544 ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 31 ತಿಂಗಳಿಂದ ಜೈಲಿನಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಮತ್ತು ಶ್ರೀ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಲಿಮಿಟೆಡ್‌ ಅಧ್ಯಕ್ಷ ಕೆ ರಾಮಕೃಷ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

ಬೆಂಗಳೂರಿನ ರಾಮಕೃಷ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ಏಕಸದಸ್ಯ ಪೀಠವು ಆರೋಪಿಯು ಬಿಎನ್‌ಎಸ್‌ಎಸ್‌ 2023ರ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ) ಸೆಕ್ಷನ್‌ 479ರ ಅಡಿಯಲ್ಲಿ ಪರಿಹಾರ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅರ್ಜಿದಾರ ಕೆ ರಾಮಕೃಷ್ಣ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಜಾರಿ ನಿರ್ದೇಶನಾಲಯವು ದಾಖಲಿಸಿರುವ ಪ್ರಕರಣವೂ ಸೇರಿದಂತೆ ಭಾರತೀಯ ದಂಡ ಸಂಹಿತೆ ಮತ್ತು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಹಿತರಕ್ಷಣಾ ಕಾಯಿದೆಯ ಅಡಿಯಲ್ಲಿನ ವಿವಿಧ ಸೆಕ್ಷನ್‌ಗಳ ಅನುಸಾರ ಒಂದಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಅಂತೆಯೇ ₹1,544 ಕೋಟಿ ದುರ್ಬಳಕೆ ಮಾಡಿಕೊಂಡ ಗಂಭೀರ ಆಪಾದನೆಯೂ ಇವರ ಮೇಲಿದೆ. ಅಲ್ಲದೆ ಆ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು ಸಹ ಅವರೇ ಆಗಿದ್ದಾರೆ ಎನ್ನುವ ಅಂಶಗಳನ್ನು ನ್ಯಾಯಾಲಯವು ಜಾಮೀನು ನಿರಾಕರಿಸುವ ವೇಳೆ ಗಣನೆಗೆ ತೆಗೆದುಕೊಂಡಿದೆ.

Also Read
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಣ ದುರ್ಬಳಕೆ: ಸಿಬಿಐ ತನಿಖೆಗೆ ಒಪ್ಪಿಸಿದ ರಾಜ್ಯ ಸರ್ಕಾರ

ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಎರಡು ವರ್ಷ ಏಳು ತಿಂಗಳು ಕಳೆದಿರುವುದರಿಂದ ಬಿಎನ್‌ಎಸ್‌ಎಸ್‌ ಸೆಕ್ಷನ್‌ 479(1) ಅನ್ನು ಆಧರಿಸಿ ಜಾಮೀನು ನೀಡಬೇಕು ಎಂಬ ಅರ್ಜಿದಾರರ ಮನವಿಯನ್ನು ಒಪ್ಪಲಾಗದು. ಭವಿಷ್ಯದಲ್ಲಿ ಅಪರಾಧಿಗೆ ವಿಧಿಸಬಹುದಾದ ಗರಿಷ್ಠ ಜೈಲು ಶಿಕ್ಷಾ ಅವಧಿಯ ಅರ್ಧಕ್ಕಿಂತಲೂ ಹೆಚ್ಚು ಅವಧಿಯವರೆಗೆ ಒಬ್ಬ ವ್ಯಕ್ತಿಯನ್ನು ಬಂಧನದಲ್ಲಿ ಮುಂದುವರಿಸಲು ಬಿಎನ್‌ಎಸ್‌ಎಸ್‌ ಸೆಕ್ಷನ್‌ 479(1)ರಲ್ಲಿ ನ್ಯಾಯಾಲಯಕ್ಕೆ ಅಧಿಕಾರ ನೀಡಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ. 

ಪಿಎಂಎಲ್‌ ಕಾಯಿದೆ ಸೆಕ್ಷನ್‌ಗಳಾದ 3, 70, 4 ಮತ್ತು 8(5)ರ ಅಡಿ ಅಪರಾಧದಲ್ಲಿ ರಾಮಕೃಷ್ಣ ಜಾಮೀನು ಕೋರಿ ಮೂರನೇ ಬಾರಿಗೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರತಿವಾದಿ ಜಾರಿ ನಿರ್ದೇಶನಾಲಯ (ಇ ಡಿ) ಪರ ವಿಶೇಷ ಅಭಿಯೋಜಕ ಎಂ ಉನ್ನಿಕೃಷ್ಣನ್‌ ವಾದ ಮಂಡಿಸಿದ್ದರು.

Attachment
PDF
K Ramakrishna Vs ED
Preview
Kannada Bar & Bench
kannada.barandbench.com