ಅರಣ್ಯ ಭೂಮಿಯಲ್ಲಿ ಸಾಗುವಳಿ: ಸಕ್ರಮ ಕೋರಿದ್ದ ಮೇಲ್ಮನವಿ ವಜಾ ಮಾಡಿದ ಹೈಕೋರ್ಟ್‌

200 ಎಕರೆಯನ್ನು ಅರಣ್ಯ ಇಲಾಖೆಗೆ ನೀಡಿರುವಾಗ, ತಮ್ಮ ಕಕ್ಷಿದಾರರು ಸಾಗುವಳಿ ಮಾಡುತ್ತಿರುವ 10 ಎಕರೆಯನ್ನಾದರೂ ಸಕ್ರಮಗೊಳಿಸಬೇಕು ಎಂದು ಮೇಲ್ಮನವಿದಾರರ ಪರ ವಕೀಲರು ಕೋರಿದರು. ಇದನ್ನೂ ನ್ಯಾಯಾಲಯ ಪುರಸ್ಕರಿಸಿಲ್ಲ.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit
Published on

ಅರಣ್ಯಕ್ಕೆ ಸೇರಿದ ಜಾಗದಲ್ಲಿ ಸಾಗುವಳಿ ಮಾಡುತ್ತಿದ ಜಮೀನನ್ನು ಸಕ್ರಮಗೊಳಿಸಲು ಕೋರಿ ಚಿಕ್ಕಮಗಳೂರಿನ ಇಬ್ಬರು ಖಾಸಗಿ ವ್ಯಕ್ತಿಗಳು ಸಲ್ಲಿಸಿದ್ದ ಮೆಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

ಅಜ್ಜಂಪುರ ತಾಲ್ಲೂಕಿನ ಬುಕ್ಕಾಂಬುದಿ ಗ್ರಾಮದ ನಿವಾಸಿಗಳಾದ ಎಸ್ ಶಿವಕುಮಾರ್‌ ಮತ್ತು ಡಿ ಮಂಜುನಾಥ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

ಪ್ರಕರಣದಲ್ಲಿ ವಿವಾದಿತ ಜಮೀನನ್ನು 1998-99ನೇ ಸಾಲಿನಲ್ಲೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಈ ಜಾಗದಲ್ಲಿ ಅರಣ್ಯ ಇಲಾಖೆಯು ನೆಡುತೋಪು ಬೆಳೆಸಿದೆ. ಹಾಗಾಗಿ, ಈ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಸಕ್ರಮಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.

200 ಎಕರೆಯನ್ನು ಅರಣ್ಯ ಇಲಾಖೆಗೆ ನೀಡಿರುವಾಗ, ತಮ್ಮ ಕಕ್ಷಿದಾರರು ಸಾಗುವಳಿ ಮಾಡುತ್ತಿರುವ 10 ಎಕರೆಯನ್ನಾದರೂ ಸಕ್ರಮಗೊಳಿಸಬೇಕು ಎಂದು ಮೇಲ್ಮನವಿದಾರರ ಪರ ವಕೀಲರು ಕೋರಿದರು.

ಆ ಮನವಿ ಪುರಸ್ಕರಿಸದ ಹೈಕೋರ್ಟ್‌, ಇಡೀ ಜಾಗವನ್ನೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಆ ಕುರಿತು ದಾಖಲೆಗಳು ಭೂ ದಾಖಲೆಗಳಲ್ಲಿ ನೋಂದಣಿಯಾಗಿವೆ. ಇದು ಅರಣ್ಯ ಜಮೀನು ಎಂಬುದಾಗಿ ಸ್ಪಷ್ಟಿಸಿ 1998ರ ನವೆಂಬರ್‌ 3ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆ ಜಾಗವನ್ನು ನೆಡುತೋಪು ಎಂಬುದಾಗಿ ಘೋಷಿಸಿ, ಅರಣ್ಯ ಇಲಾಖೆಯು ಅಕೇಶಿಯಾ ಮತ್ತು ನೀಲಿಗಿರಿ ಮರಗಳನ್ನು ಬೆಳೆಸಿದೆ. ಹೀಗಾಗಿ, ಅರ್ಜಿದಾರರ ಮನವಿಯನ್ನು ಪರಿಗಣಿಸಲಾಗದು ಎಂದು ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.

ಅರ್ಜಿದಾರರು ಸಾಗುವಳಿ ಮಾಡುತ್ತಿದ್ದ ಜಾಗವು ಸೇರಿದಂತೆ ಸುಮಾರು 200 ಎಕರೆಯನ್ನು 1998ರಲ್ಲಿ ಅರಣ್ಯ ಪ್ರದೇಶ ಎಂದು ಅಧಿಸೂಚನೆ ಹೊರಡಿಲಾಗಿದೆ. ಇದರಿಂದ ತಾವು ಕಳೆದ 30 ವರ್ಷಗಳಿಂದ ಜಾಗವನ್ನು ಸಾಗುವಳಿ ಮಾಡುತ್ತಿದ್ದು, ಅದನ್ನು ಸಕ್ರಮಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ ಹೈಕೋರ್ಟ್‌ ಏಕ ಸದಸ್ಯ ಪೀಠವು 2023ರ ಆಗಸ್ಟ್‌ನಲ್ಲಿ ಆದೇಶಿಸಿತ್ತು. ಇದರಿಂದ ಅರ್ಜಿದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Attachment
PDF
Shivakumar Vs State of Karnataka.pdf
Preview
Kannada Bar & Bench
kannada.barandbench.com