
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದ 16ನೇ ಆರೋಪಿ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಚಂದ್ರಶೇಖರ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ವಜಾಗೊಳಿಸಿತು.
ಆರೋಪಿಗಳು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ಆರೋಪದ ಮೇರೆಗೆ ಚಂದ್ರಶೇಖರ ಅವರ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಪುರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರಶೇಖರ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಬಿಐ ಪರ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.
ಪ್ರಕರಣದ 15ನೇ ಆರೋಪಿಯಾಗಿರುವ ಧಾರವಾಡ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ತಿರಸ್ಕರಿಸಿದ್ದು ವಿಚಾರಣಾ ನ್ಯಾಯಾಲಯಕ್ಕೆ ಇದೇ 13ರೊಳಗೆ ಶರಣಾಗುವಂತೆ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.