
“ರಾಜ್ಯದ ಲೆಕ್ಕವಿಲ್ಲದಷ್ಟು ಚಟುವಟಿಕೆಗಳನ್ನು ನಿಯಂತ್ರಿಸುವ ನೀತಿಗಳ ಆಡಳಿತಕ್ಕೆ ಸರ್ವೋಚ್ಚ ಸಲಹೆಗಾರನ ಪಾತ್ರವನ್ನು ನ್ಯಾಯಾಧೀಶರು ವಹಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಈಚೆಗೆ ಹೇಳಿರುವ ಕರ್ನಾಟಕ ಹೈಕೋರ್ಟ್, ಸಕ್ಕರೆ ತುಂಬಲು ಬಳಕೆ ಮಾಡಲಾಗುವ ಸೆಣಬಿನ ಚೀಲಗಳಲ್ಲಿನ ಸೆಣಬಿನ ಬಾಚಿಂಗ್ ಎಣ್ಣೆಯು ಹಲವು ಆರೋಗ್ಯ ಸಮಸ್ಯೆ ಉಂಟು ಮಾಡಲಿದೆ ಮತ್ತು ಸೆಣಬಿನ ಚೀಲಗಳ ವಿಚಾರದಲ್ಲಿನ ನೀತಿ ನಿರ್ಧಾರವನ್ನು ನಿರ್ಧರಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಸ್ಥೆ ಮತ್ತು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಸ್ಥೆಯು ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ. 1987ರ ಕಾಯಿದೆ ಅಡಿ ಸಕ್ಕರೆ ತುಂಬಲು ಶೇ. 20ರಷ್ಟು ಸೆಣಬಿನ ಚೀಲ ಬಳಕೆ ಮಾಡಬೇಕು ಎಂದು ಜವಳಿ ಇಲಾಖೆಯು ಹೊರಡಿಸಿದ್ದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಸೆಣಬಿನ ಪ್ಯಾಕೇಜಿಂಗ್ ಉತ್ಪನ್ನಗಳ (ಪ್ಯಾಕೇಜಿಂಗ್ ಉತ್ಪನ್ನಗಳಲ್ಲಿನ ಕಡ್ಡಾಯ ಬಳಕೆ) ಕಾಯಿದೆ 1987ರ ಅಡಿ ಬರುವ ಸಲಹಾ ಸಮಿತಿ ಮತ್ತು ಸೆಣಬಿನ ಬಾಚಿಂಗ್ ಎಣ್ಣೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಇರುವ ಕುರಿತು ತಜ್ಞರು ಪರಿಶೀಲಿಸಲಿದ್ದಾರೆ. 1987ರ ಕಾಯಿದೆಯನ್ನು ಸೆಣಬು ಕ್ಷೇತ್ರವನ್ನು ರಕ್ಷಿಸಲು ರೂಪಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸಕ್ಕರೆ ತುಂಬಲು ಶೇ. 100ರಷ್ಟು ಸೆಣಬಿನ ಚೀಲಗಳನ್ನು ಬಳಕೆ ಮಾಡುವುದು ಕಡ್ಡಾಯ ಎಂಬ ನೀತಿಯ ಸಿಂಧುತ್ವವನ್ನು ಹಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದರಿಂದ ಸಕ್ಕರೆ ತುಂಬಲು ಶೇ.20ರಷ್ಟು ಸೆಣಬಿನ ಚೀಲಗಳನ್ನೇ ಬಳಕೆ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಹೇಳುವುದು ಸ್ವೇಚ್ಛೆಯ ಕ್ರಮವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸೆಣಬಿನ ಬಾಚಿಂಗ್ ಎಣ್ಣೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಇವೆ ಎಂದು ಮೊದಲ ಬಾರಿಗೆ ವರದಿಗಳನ್ನು ಉಲ್ಲೇಖಿಸಿ ಅರ್ಜಿದಾರರು ಹೇಳುತ್ತಿದ್ದಾರೆ. ಈ ವರದಿಗಳನ್ನು ಸೆಣಬಿನ ಚೀಲಗಳ ಬಳಕೆಯ ಬಗ್ಗೆ ನಿರ್ಧರಿಸಲು ವಾರ್ಷಿಕವಾಗಿ ಸಭೆ ನಡೆಸುವ ಸಲಹಾ ಸಮಿತಿಯು ಪರಿಶೀಲಿಸಬೇಕಿರುವುದರಿಂದ ಅದನ್ನು ತಾನು ಅದನ್ನು ನಿರ್ಧರಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
"ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ, ಒಬ್ಬ ಸಾಮಾನ್ಯ ವ್ಯಕ್ತಿ ತನ್ನನ್ನು ತಾನು ಮಾಂತ್ರಿಕ ದಂಡವನ್ನು ಹಿಡಿದ ವ್ಯಕ್ತಿಯಾಗಿ ಪರಿವರ್ತಿಸಿಕೊಳ್ಳುತ್ತಾನೆ ಮತ್ತು ನೀತಿಗಳ ಬಗ್ಗೆ ಸಲಹೆ ನೀಡುವ ಪ್ರಶ್ನಾತೀತ ಅಧಿಕಾರ ಹೊಂದಲು ಅರ್ಹತೆ ಪಡೆಯುತ್ತಾನೆ ಎಂಬುದು ಊಹಿಸಲೂ ಸಾಧ್ಯವಿಲ್ಲ. ಅಂತಹ ನೀತಿಗಳನ್ನು ರೂಪಿಸಿದ ತಜ್ಞರ ಸ್ಥಾನದಲ್ಲಿ ನಿಂತು ಅವುಗಳನ್ನು ನ್ಯಾಯಾಲಯ ರದ್ದುಗೊಳಿಸಲಾಗದು” ಎಂದಿದ್ದು, ಸೆಣಬಿನ ಚೀಲಗಳ ಬಳಕೆಯ ನೀತಿಯು ತಮ್ಮ ವ್ಯಾಪಾರವನ್ನು ಮುಂದುವರಿಸುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಕ್ಕರೆ ಉದ್ಯಮದ ವಾದವನ್ನು ತಿರಸ್ಕರಿಸಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಉದಯ್ ಹೊಳ್ಳ, ಧ್ಯಾನ್ ಚಿನ್ನಪ್ಪ ಮತ್ತು ವಕೀಲ ಬಿ ಎಂ ಮೋಹನ್ ಕುಮಾರ್ ವಾದಿಸಿದ್ದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ವಾದಿಸಿದ್ದರು.