ಕಾರ್ಮಿಕರ ಮೆರವಣಿಗೆಯನ್ನು ಕರಗದ ಜೊತೆ ಹೋಲಿಕೆ ಮಾಡಲಾಗದು: ಮೆರವಣಿಗೆಗೆ ಅನುಮತಿ ನಿರಾಕರಿಸಿದ ಹೈಕೋರ್ಟ್‌

ಕರಗ ಉತ್ಸವದ ಹಿನ್ನೆಲೆಯನ್ನು ಪರಿಗಣಿಸಿ ಮೆರವಣಿಗೆ ನಡೆಸಲು ಹೈಕೋರ್ಟ್ ಅನುಮತಿ ನೀಡಿತ್ತು. ಮುಖ್ಯವಾಗಿ ಕರಗ ಮೆರವಣಿಗೆ ರಾತ್ರಿ ನಡೆಯುತ್ತದೆ. ಕರಗವನ್ನು ಕಾರ್ಮಿಕ ದಿನಾಚರಣೆಗೆ ಹೋಲಿಕೆ ಮಾಡಲು ಆಗದು ಎಂದ ವಾದಿಸಿದ ಸರ್ಕಾರ.
Karnataka High Court
Karnataka High Court
Published on

ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೇ 1ರಂದು ನಗರದಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಕಾರ್ಮಿಕ ಸಂಘಟನೆಗಳಿಗೆ ಅನುಮತಿ ನೀಡಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿತು.

ಬೆಂಗಳೂರಿನಲ್ಲಿ ಮೇ 1ರಂದು ಶಾಂತಿಯುತವಾಗಿ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದನ್ನು ಆಕ್ಷೇಪಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಸಲ್ಲಿಸಿದ್ದ ಮಧ್ಯಂತರ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್‌ ದೇವದಾಸ್‌ ಮತ್ತು ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಮೇ 1ರಂದು ಹಗಲಿನಲ್ಲಿ ಮೆರವಣಿಗೆ ನಡೆಸಲು ಕಾರ್ಮಿಕ ಸಂಘಟನೆಗಳು ಇಚ್ಛಿಸಿದ್ದು, ಇದರಿಂದ ವಾಹನ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಲಿದೆ. ಕಾರ್ಮಿಕರ ಮೆರವಣಿಗೆಯನ್ನು ಕರಗ ಮೆರವಣಿಗೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಬೆಂಗಳೂರು ನಗರದ ರಸ್ತೆಯಲ್ಲಿ ಮೆರವಣಿಗೆ ನಡೆಸಬಾರದು ಹಾಗೂ ಅದಕ್ಕೆ ಅನುಮತಿ ನೀಡಬಾರದು ಎಂದು ಈ ಹಿಂದೆ ಹೈಕೋರ್ಟ್ ಹೊರಡಿಸಿರುವ ಆದೇಶಕ್ಕೆ ಅನುಗುಣವಾಗಿ ಪೊಲೀಸರು ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ. ಆದ್ದರಿಂದ ಕಾರ್ಮಿಕರ ಸಂಘಟನೆಗಳ ಸದಸ್ಯರ ಮೆರವಣಿಗೆಗೆ ಅನುಮತಿ ನೀಡಬೇಕೆಂಬ ಕೋರಿಕೆಯನ್ನು ಪುರಸ್ಕರಿಸಲಾಗದು” ಎಂದು ಪೀಠ ಆದೇಶಿಸಿದೆ.

“ಅರ್ಜಿದಾರರ ಸಂಘಟನೆಗಳ ಸದಸ್ಯರು ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಸಭೆ ನಡೆಸಲು ಅನುಮತಿ ನೀಡಬಹುದು. ನಗರದಲ್ಲಿ ಮೆರೆವಣಿಗೆ ನಡೆಸಲು ನ್ಯಾಯಾಲಯ ಅನುಮತಿಸಿಲ್ಲ” ಎಂದು ಪೀಠವು ಮನವಿ ಇತ್ಯರ್ಥಪಡಿಸಿತು.

ಅರ್ಜಿದಾರರ ಪರ ವಕೀಲರು “ಬೆಂಗಳೂರು ಕರಗ ಮೆರವಣಿಗೆ ನಡೆಸಲು ಹೈಕೋರ್ಟ್ ಏಪ್ರಿಲ್‌ 13ರಂದು ಅನುಮತಿ ನೀಡಿತ್ತು. ಮೇ1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಇದೆ. ಅರ್ಜಿದಾರರ ಸಂಘಟನೆಗಳ ಸದಸ್ಯರು ನಗರದ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನ ಮತ್ತು ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಶಾಂತಿಯುತ ಮೆರವಣಿಗೆ ನಡೆಸುತ್ತಾರೆ. ಬಳಿಕ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಸಭೆಗೆ ಹಾಜರಾಗುತ್ತಾರೆ. ಹಾಗಾಗಿ, ಮೆರವಣಿಗೆ ನಡೆಸಲು ಕಾರ್ಮಿಕರ ಸಂಘಟನೆಗಳಿಗೆ ಅನುಮತಿಸಬೇಕು” ಎಂದು ಕೋರಿದ್ದರು.

ಇದಕ್ಕೆ ಸರ್ಕಾರಿ ವಕೀಲರು “ಕರಗ ಉತ್ಸವದ ಹಿನ್ನೆಲೆಯನ್ನು ಪರಿಗಣಿಸಿ ಮೆರವಣಿಗೆ ನಡೆಸಲು ಹೈಕೋರ್ಟ್ ಅನುಮತಿ ನೀಡಿತ್ತು. ಮುಖ್ಯವಾಗಿ ಕರಗ ಮೆರವಣಿಗೆ ರಾತ್ರಿ ನಡೆಯುತ್ತದೆ. ಕರಗವನ್ನು ಕಾರ್ಮಿಕ ದಿನಾಚರಣೆಗೆ ಹೋಲಿಕೆ ಮಾಡಲು ಆಗದು” ಎಂದು ಆಕ್ಷೇಪಿಸಿದ್ದರು.

ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ನಗರದ ಇತರೆ ಯಾವುದೇ ಭಾಗದಲ್ಲೂ ಯಾವುದೇ ರಾಜಕೀಯ ಅಥವಾ ರಾಜಕಿಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಸದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ ಹೈಕೋರ್ಟ್ ಈಚೆಗೆ ಆದೇಶಿಸಿತ್ತು.

Kannada Bar & Bench
kannada.barandbench.com