ಕೆಎಎಸ್ ಅಧಿಕಾರಿ ಬಿ ಸುಧಾ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅವರ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ಅಲ್ಲದೇ, ಹೈಕೋರ್ಟ್ ಅನುಮತಿ ಇಲ್ಲದೇ ಸಕ್ಷಮ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬಾರದು ಎಂದು ಮಾಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ತೆರವುಗೊಳಿಸಿದೆ.
ಸುಧಾ ಮತ್ತು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಆಕೆಯ ಪತಿ ಸ್ಟ್ರೋಯ್ನಿ ಜೋಸೆಫ್ ಪ್ಯಾಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಆರೋಪ ಪಟ್ಟಿಯಲ್ಲಿನ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಿದರೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿದಾರರಿಗೆ ಸಮರ್ಥನೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ, ಆರೋಪ ಪಟ್ಟಿಯಲ್ಲಿನ ಅಂಶಗಳನ್ನು ಉಲ್ಲೇಖಿಸುವುದರಿಂದ ಈ ನ್ಯಾಯಾಲಯವು ಅಂತರ ಕಾಯ್ದುಕೊಂಡಿದೆ. ಆದರೆ, ನಿಸ್ಸಂಶಯವಾಗಿ ಅಪರಾಧ ಕೃತ್ಯಗಳು ಗಂಭೀರವಾಗಿದ್ದು, ಎಲ್ಲಾ ಅಪರಾಧಗಳು ನಿರ್ದಿಷ್ಟವಾಗಿ ಸುಧಾ ಅವರು ಭ್ರಷ್ಟಾಚಾರದಲ್ಲಿ ಆಳವಾಗಿ ಮುಳುಗಿರುವುದರತ್ತ ಬೆರಳು ಮಾಡುತ್ತವೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಮೇಲ್ನೋಟಕ್ಕೆ ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ಅಪಾರವಾದ ದಾಖಲೆಗಳು ನಿಸ್ಸಂಶಯವಾಗಿ ವಿಚಾರಣೆಯನ್ನು ಬೇಡುತ್ತವೆ. ಇಲ್ಲಿ ನಿರಪರಾಧಿಯಾಗಿ ಹೊರಬರುವುದು ಅರ್ಜಿದಾರರಿಗೆ ಬಿಟ್ಟ ವಿಚಾರವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
2024ರ ಆಗಸ್ಟ್‌ನಲ್ಲಿ ತನ್ನ ಅನುಮತಿ ಪಡೆಯದೇ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬಾರದು ಎಂದು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿತ್ತು. ಇದರಂತೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಪ್ರಸ್ತಾವಿತ ಆರೋಪ ಪಟ್ಟಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದರು.
ಕಾನೂನಿಗೆ ವಿರುದ್ಧವಾಗಿ ತನಿಖೆ ನಡೆಸಲಾಗಿದೆ ಎಂಬ ಕೆಎಎಸ್ ಅಧಿಕಾರಿಯ ವಾದವನ್ನು ಅಲ್ಲಗಳೆದಿರುವ ನ್ಯಾಯಾಲಯವು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 13 ಆದಾಯ ಮೀರಿದ ಆಸ್ತಿಗೆ ಸಂಬಂಧಿಸಿದ್ದು, ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಬೇಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ದೂರಿನ ತನಿಖೆಗೆ ಆದೇಶಿಸಿರುವ ವಿಶೇಷ ನ್ಯಾಯಾಲಯದ ಆದೇಶದಲ್ಲಿ ಹೈಕೋರ್ಟ್ ಯಾವುದೇ ಲೋಪವಾಗಿದೆ ಎಂದು ಹೇಳಿಲ್ಲ.
2020ರ ಆಗಸ್ಟ್ 20ರಂದು ಟಿ ಜೆ ಅಬ್ರಾಹಂ ಸಲ್ಲಿಸಿದ್ದ ಖಾಸಗಿ ದೂರನ್ನು ವಿಶೇಷ ನ್ಯಾಯಾಲಯವು ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಿತ್ತು. ಎಸಿಬಿ ರದ್ದಾದ ಬಳಿಕ ಪ್ರಕರಣವನ್ನು ಲೋಕಾಯುಕ್ತ ಪೊಲೀಸ್‌ಗೆ ವರ್ಗಾಯಿಸಿತ್ತು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪವಿಭಾಗಾಧಿಕಾರಿ ಮತ್ತು ಭೂಸ್ವಾಧೀನ ಅಧಿಕಾರಿಯಾಗಿದ್ದಾಗ ಸುಧಾ ಅವರು ಪಡೆದ ಲಂಚದ ಹಣದಲ್ಲಿ ಬೆಂಗಳೂರು, ಉಡುಪಿ ಮತ್ತು ದೊಡ್ಡಬಳ್ಳಾಪುರದಲ್ಲಿ ಹಲವು ಕೋಟಿ ಮೌಲ್ಯದ ಬೆಲೆಯ ಸ್ಥಿರಾಸ್ತಿಗಳನ್ನು ಖರೀದಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಭೂಸ್ವಾಧೀನಕ್ಕೆ ಸಂಬಂಧಿಸಿದ ಕಡತಗಳನ್ನು ಮುಂದಿನ ಹಂತಕ್ಕೆ ಕಳುಹಿಸುವಾಗ ಆ ಭೂಮಾಲೀಕರ ಸಂಪರ್ಕ ಸಂಖ್ಯೆಯನ್ನು ತನ್ನ ಏಜೆಂಟ್‌ಗೆ ನೀಡುತ್ತಿದ್ದರು. ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರಕ್ಕೆ ನೀಡುವಾಗ ಅವರಿಂದ ಏಜೆಂಟ್ ಲಂಚ ಪಡೆದುಕೊಂಡಿದ್ದರು ಎಂದು ಅಬ್ರಹಾಂ ಆರೋಪಿಸಿದ್ದರು.