
ರಾಜ್ಯದಲ್ಲಿ ಕಳೆದ ಸೋಮವಾರದಿಂದ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025ಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಆದರೆ, ರಾಜ್ಯದ ಜನರು ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ, ಇಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತನ್ನನ್ನು ಹೊರತುಪಡಿಸಿ ಬೇರಾರಿಗೂ ಸೋರಿಕೆಯಾಗದಂತೆ ಗೌಪ್ಯತೆ ಕಾಯ್ದುಕೊಳ್ಳಬೇಕು ಮತ್ತು ಈ ಸಂಬಂಧ ಅಫಿಡವಿಟ್ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಸಮೀಕ್ಷೆಗಾಗಿ ಆಗಸ್ಟ್ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ಇಂದೂ ನಡೆಸಿತು.
ಎಲ್ಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು "ಸಮೀಕ್ಷೆಯ ಪ್ರಕ್ರಿಯೆಯನ್ನು ತಡೆಯುವುದು ಸೂಕ್ತ ಎನಿಸುವುದಿಲ್ಲ. ಆದರೆ, ಆಯೋಗವು ಸಂಗ್ರಹಿಸುವ ದತ್ತಾಂಶವನ್ನು ಯಾರಿಗೂ ಬಹಿರಂಗಪಡಿಸುವಂತಿಲ್ಲ. ಅದನ್ನು ಸಂರಕ್ಷಿಸಿ, ಗೌಪ್ಯವಾಗಿ ಜತನದಿಂದ ಆಯೋಗ ಕಾಪಾಡಬೇಕು. ಸಮೀಕ್ಷೆಯಲ್ಲಿ ಜನರು ಸ್ವಯಂಪ್ರೇರಿತವಾಗಿ ಭಾಗವಹಿಸಬಹುದು. ಅಲ್ಲಿ ಯಾವುದೇ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ ಎಂಬುದರ ಸಂಬಂಧ ಆಯೋಗವು ಹೊರಡಿಸುವ ಅಧಿಸೂಚನೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ದತ್ತಾಂಶ ಸಂಗ್ರಹಿಸಲು ಮನೆಮನೆಗೆ ತೆರಳುವ ಮೇಲ್ವಿಚಾರಕರು ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ ಎಂಬುದನ್ನು ಜನರಿಗೆ ತಿಳಿಸಬೇಕು. ಒಂದೊಮ್ಮೆ ಸಮೀಕ್ಷೆಯಲ್ಲಿ ಜನರು ಭಾಗವಹಿಸಲು ನಿರಾಕರಿಸಿದರೆ, ಮೇಲ್ವಿಚಾರಕರು ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಜನರನ್ನು ಪುಸಲಾಯಿಸುವಂತಿಲ್ಲ" ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅಲ್ಲದೇ, “ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶವು ಆಯೋಗವಲ್ಲದೇ ಬೇರಾರಿಗೂ ಲಭ್ಯವಾಗಬಾರದು. ದತ್ತಾಂಶ ಸಂಗ್ರಹ ಮತ್ತು ಅದರ ಜತನಕ್ಕೆ ಸಂಬಂಧಿಸಿದಂತೆ ತಾನು ಕೈಗೊಂಡಿರುವ ಕ್ರಮದ ಬಗ್ಗೆ ಆಯೋಗವು ನಾಳೆಯೊಳಗೆ ಅಫಿಡವಿಟ್ ಸಲ್ಲಿಸಬೇಕು” ಎಂದು ಆದೇಶಿಸಿದೆ. ಜೊತೆಗೆ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಮತ್ತು ಪಕ್ಷಕಾರರು ತಮ್ಮ ವಾದಾಂಶ ಸಲ್ಲಿಸಲು ಸ್ವತಂತ್ರರು ಎಂದಿರುವ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ಗೆ ಮುಂದೂಡಿದೆ.
ಅಂತಿಮವಾಗಿ ಪೀಠವು ಆಯೋಗದ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು ಸಮೀಕ್ಷೆಯಲ್ಲಿ ಜನರು ಭಾಗವಹಿಸುವುದು ಸ್ವಯಂಪ್ರೇರಿತ ಎಂದು ಹೇಳಿರುವುದನ್ನು ಪರಿಗಣಿಸಿರುವುದಾಗಿ ಮೌಖಿಕವಾಗಿ ಹೇಳಿತು.
ಇದಕ್ಕೂ ಮುನ್ನ, ಪ್ರೊ.ರವಿವರ್ಮ ಕುಮಾರ್ ಅವರು ಸಮೀಕ್ಷೆಯಲ್ಲಿ ಭಾಗವಹಿಸುವ ಮೇಲ್ವಿಚಾರಕರಿಗೆ ಎಲ್ಲಾ ರೀತಿಯ ಮಾಹಿತಿ ನೀಡಲಾಗಿದೆ. ಜನರು ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ ಎಂಬುದನ್ನೂ ಅವರಿಗೆ ತಿಳಿಸಲಾಗಿದೆ ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ದತ್ತಾಂಶ ರಕ್ಷಣೆಯ ಜವಾಬ್ದಾರಿಯು ಇ-ಆಡಳಿತ ಇಲಾಖೆಗೆ ವಹಿಸಲಾಗಿದೆ. ಇದಕ್ಕೆ ಪೂರಕವಾಗಿ ಅಫಿಡವಿಟ್ ಸಲ್ಲಿಸಲಾಗುವುದು” ಎಂದರು.
ಪ್ರತ್ಯುತ್ತರ ದಾಖಲಿಸಿದ ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿ, ಅಶೋಕ್ ಹಾರನಹಳ್ಳಿ, ವಿವೇಕ್ ಸುಬ್ಬಾರೆಡ್ಡಿ ಮತ್ತು ಎಸ್ ಶ್ರೀರಂಗ ಅವರು “ದತ್ತಾಂಶ ರಕ್ಷಣೆಯು ಅತ್ಯಂತ ದೊಡ್ಡ ಸವಾಲಾಗಿದ್ದು, ಇದನ್ನು ನಿರ್ವಹಿಸಲು ಸರ್ಕಾರದ ಬಳಿ ಯಾವುದೇ ವ್ಯವಸ್ಥೆ ಇಲ್ಲ” ಎಂದು ಆಕ್ಷೇಪಿಸಿದರು.