ಮಂಗಳೂರಿನ ಪಚ್ಚನಾಡಿ ಪ್ರದೇಶ ಮತ್ತು ಮರವೂರ ಜಲಾಶಯದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕಲುಷಿತವಾಗಿರುವುದರಿಂದ 13 ಗ್ರಾಮಗಳ ಜನರಿಗೆ ಪೂರೈಸಲಾಗುತ್ತಿರುವ ನೀರಿನ ಗುಣಮಟ್ಟ ಪರಿಶೀಲಿಸುವ ಸಂಬಂಧ ತಜ್ಞರ ಸಮಿತಿ ರಚಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ನಿರ್ದೇಶಕರಿಗೆ ಗುರುವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ (ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುತಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ಮಂಗಳೂರು ನಗರ ಪಾಲಿಕೆ (ಎಂಸಿಸಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ತದ್ವಿರುದ್ಧ ವರದಿ ಸಲ್ಲಿಸಿದ್ದನ್ನು ಗಮನಿಸಿ, ಮೇಲಿನಂತೆ ಆದೇಶಿಸಿತು.
ಕೆಎಸ್‌ಪಿಸಿಬಿಯನ್ನು ಪ್ರತಿನಿಧಿಸಿದ್ದ ವಕೀಲ ಗುರುರಾಜ್ ಜೋಷಿ ಅವರು “ಆಗಸ್ಟ್ 24ರ ವರದಿಯಲ್ಲಿ ನೀರು ಮನುಷ್ಯರ ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ, ತಕ್ಷಣ ಪರಿಹಾರಾತ್ಮಕ ಕ್ರಮಕೈಗೊಳ್ಳಬೇಕು ಎಂದು ಹೇಳಲಾಗಿದೆ” ಎಂದರು.
ಎಂಸಿಸಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು “ಮೊದಲು ಸಲ್ಲಿಸಿದ್ದ ವರದಿಯಲ್ಲಿ ನೀರು ಕಲುಷಿತವಾಗಿದೆ ಎಂದು ಕೆಎಸ್‌ಪಿಸಿಬಿ ಹೇಳಿತ್ತು. ಆನಂತರ ಸಲ್ಲಿಸಿದ ವರದಿಯಲ್ಲಿ ಇನ್ನೊಂದು ರೀತಿಯಲ್ಲಿ ವಿವರಿಸಲಾಗಿದೆ. ನಿರಂತರವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, ಕುಡಿಯುವ ನೀರಿನಲ್ಲಿ ಮಾಲಿನ್ಯದ ಮಟ್ಟವು ಗುಣಮಟ್ಟ ವ್ಯಾಪ್ತಿಯ ಒಳಗಿದೆ. ಅಲ್ಲದೇ, ಅದು ವಿಷಕಾರಿಯಾಗಿಲ್ಲ” ಎಂದರು.
“ಎಂಸಿಸಿಯು ಜನರಿಗೆ ಪೂರೈಸುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಕುರಿತು ಪಕ್ಷಕಾರರು ತದ್ವಿರುದ್ಧ ನಿಲುವು ಹೊಂದಿರುವ ಹಿನ್ನೆಲೆಯಲ್ಲಿ ಜನರಿಗೆ ಪೂರೈಸಲಾಗುತ್ತಿರುವ ನೀರಿಗೆ ಸಂಬಂಧಿಸಿದಂತೆ ಆರಂಭ ಮತ್ತು ಅಂತ್ಯ ಎರಡೂ ಕೇಂದ್ರಗಳನ್ನು ಒಳಗೊಂಡು ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಸುವಂತೆ ಸ್ವತಂತ್ರ ಸಂಸ್ಥೆಯಾದ ಐಐಎಸ್‌ಸಿಗೆ ನಿರ್ದೇಶಿಸುವುದು ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದೇವೆ” ಎಂದು ಪೀಠ ಹೇಳಿತು.
ತಜ್ಞರ ಸಮಿತಿಗೆ ಅಗತ್ಯವಾದ ನೆರವು ನೀಡುವಂತೆ ಕೆಎಸ್‌ಪಿಸಿಬಿ ಮತ್ತು ಎಂಸಿಸಿಗೆ ನ್ಯಾಯಾಲಯ ನಿರ್ದೇಶಿಸಿದೆ. 15 ದಿನಗಳ ಒಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಐಐಎಸ್‌ಸಿ ತಂಡಕ್ಕೆ ಪೀಠವು ನಿರ್ದೇಶಿಸಿದೆ.
ಪಚ್ಚನಾಡಿ ಕಸ ಸುರಿಯುವ ಸ್ಥಳದಲ್ಲಿ ಸುದೀರ್ಘ ಕಾಲದಿಂದ ಸಂಗ್ರಹವಾಗಿರುವ ತ್ಯಾಜ್ಯವನ್ನು ಸ್ಥಳಾಂತರಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಎಂಸಿಸಿ ಹೇಳಿತು. ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ, ಸುದೀರ್ಘ ಕಾಲದಿಂದ ಉಳಿದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕೆಲಸ ಆರಂಭಿಸಿ ಎಂದು ಹೇಳಿ, ವಿಚಾರಣೆಯನ್ನು ನವೆಂಬರ್ 30ಕ್ಕೆ ನ್ಯಾಯಾಲಯ ಮುಂದೂಡಿತು. ಕೆಎಸ್‌ಎಲ್‌ಎಸ್‌ಎ ಪರವಾಗಿ ವಕೀಲ ಶ್ರೀಧರ್ ಪ್ರಭು ಹಾಜರಾಗಿದ್ದರು.