
ಕಳೆದ ತಿಂಗಳು ಮಂಗಳೂರಿನಲ್ಲಿ ಕೊಲೆಯಾದ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಗುರಿಯಾಗಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಬಂಟ್ವಾಳ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ನಡೆಸಿತು.
ಕಲ್ಲಡ್ಕ ಪ್ರಭಾಕರ್ ಭಟ್ ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ಆರೋಪಪಟ್ಟಿ ಸಲ್ಲಿಸುವಂತಿಲ್ಲ. ಅಲ್ಲದೇ, ಪ್ರಭಾಕರ್ ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿ, ವಿಚಾರಣೆಯನ್ನು ಜೂನ್ 10 ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಮಂಗಳೂರಿನ ಬಜ್ಪೆಯಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಮೇ 12ರಂದು ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಮಧ್ವ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಸಭೆಯಲ್ಲಿ ಪ್ರಭಾಕರ್ ಭಟ್ ಭಾಗವಹಿಸಿದ್ದರು.
ಪಿಎಸ್ಐ ಟಿ ಮಂಜುನಾಥ್ ಬಂಟ್ವಾಳ ಗ್ರಾಮೀಣ ಠಾಣೆಗೆ ನೀಡಿರುವ ದೂರಿನಂತೆ ಕಲ್ಲಡ್ಕ ಪ್ರಭಾಕರ್ ಭಟ್ ತಮ್ಮ ಭಾಷಣದಲ್ಲಿ, “ನಾವು ಹಸುಗಳನ್ನು ಕತ್ತರಿಸುವುದನ್ನು ಒಪ್ಪುವುದಿಲ್ಲ. ಅದಕ್ಕೋಸ್ಕರ ಒಂದಷ್ಟು ತರುಣರು ಎದ್ದು ನಿಂತಿದ್ದಾರೆ. ರೌಡಿಗಳಾಗಿರಲಿ ಅವರು ದೇಶಪ್ರೇಮಿಗಳು. ಅವರು ಧರ್ಮ ರಕ್ಷಣೆ ಮಾಡುವವರು. ಬ್ಯಾರಿಯೇ ಮತಾಂತರ ಮಾಡಲಿಕ್ಕೆ ಪ್ರೇರಣೆ ನೀಡುವಂಥದ್ದು, ಬ್ಯಾರಿಯೇ ಆಕ್ರಮಣ ಮಾಡಿರುವುದು ತುಂಬಾ ಇದೆ. ಅದಕ್ಕೋಸ್ಕರ ನಾವು ಏನಾದರೂ ತಯಾರು ಆಗಲಿಲ್ಲ ಎಂದರೆ ಪ್ರತಿಭಟನೆಗೆ ತಯಾರಾಗಲಿಲ್ಲ ಎಂದರೆ... ದಯವಿಟ್ಟು ನೀವು ಹೆದರಬೇಕಾಗಿಲ್ಲ. ಮನುಷ್ಯ ಇವತ್ತಲ್ಲಾ ನಾಳೆ ಸಾಯುವುದೇ.. ಅದರಲ್ಲಿ ಎರಡು ಮಾತಿಲ್ಲ. ಇದನ್ನು ಸುಹಾಸ ನೆನಪಿಟ್ಟುಕೊಂಡು ಹೋರಾಟ ಮಾಡಿದ್ದಾನೆ" ಎಂದಿದ್ದರು.
ಮುಂದುವರೆದು, "ನಾವು ನರಿ ನಾಯಿ ಮಕ್ಕಳಲ್ಲ. ಸಿಂಹದ ಮಕ್ಕಳು, ಮಗನ ಹಾಗೆ ಸುಹಾಸ್ ಬದುಕಿದ್ದಾನೆ. ಅದೇ ಪರಂಪರೆಯಲ್ಲಿ ಅದೇ ದೃಷ್ಟಿಯಲ್ಲಿ ಮುಂದುವರಿಸಿಕೊಂಡು ನಾವು ಕೆಲಸ ಮಾಡಬೇಕಾದ ಅಗತ್ಯ ಇದೆ. ಅದಕ್ಕೋಸ್ಕರ ಯಾರೂ ಹೆದರ ಬೇಡಿ, ಕೇಸ್ ಬೀಳುತ್ತದೆ. ಯಾವ ರೀತಿಯಲ್ಲಿ ಹೆದರಿಸಬೇಕು ಎಂಬುದನ್ನು ನೋಡೋಣ. ಹೋರಾಟ ಮಾಡಿ, ಯಾರು ಬಿಡಬೇಡಿ. ಮೋಸ ಮಾಡುವವರ ಜೊತೆ ವ್ಯಾಪಾರ ಮಾಡಬೇಡಿ. ನಮ್ಮ ಹಣದಿಂದಲೇ ಅವರು ತಲವಾರು ತೆಗೆದುಕೊಂಡಿರುವುದು. ನಮ್ಮ ಹಣದಿಂದಲೇ ರಾಡ್ ತೆಗೆದುಕೊಂಡಿರುವುದು. ನಮ್ಮ ಹಣದಿಂದಲೇ ಪಿಸ್ತೂಲ್ ತೆಗೆದುಕೊಂಡಿರುವುದು" ಎಂದು ಭಾಷಣ ಮಾಡಿದ್ದರು. ಪಿಎಸ್ಐ ಟಿ ಮಂಜುನಾಥ್ ದೂರಿನ ಅನ್ವಯ ಪ್ರಭಾಕರ್ ಭಟ್ ವಿರುದ್ಧ ಬಂಟ್ವಾಳ ಗ್ರಾಮೀಣ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.