

ಬಿಬಿಎಂಪಿ (ಜಿಬಿಎ) ನಡೆಸುತ್ತಿರುವ ಶಾಲೆ ಹಾಗೂ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಸದ್ಯ ಅವರು ಕೆಲಸ ಮಾಡುತ್ತಿರುವ ಸ್ಥಳದಿಂದ ಬೇರೆ ಕಡೆ ನಿಯೋಜನೆ ಅಥವಾ ಸ್ಥಳಾಂತರ ಮಾಡದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ಮಾಡಿದೆ.
ಕೋದಂಡರಾಮಪುರ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್ ನಾಯ್ಕ್ ಸೇರಿ ಬಿಬಿಎಂಪಿಯಿಂದ ನಡೆಸಲಾಗುತ್ತಿರುವ ನಗರದ ವಿವಿಧ ಕಡೆಯ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರಾಗಿ ಮತ್ತು ಉಪನ್ಯಾಸಕರಾಗಿ 2008ರಿಂದ ಸೇವೆ ಸಲ್ಲಿಸುತ್ತಿರುವ 21 ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ಇಂತಹದ್ದೇ ಹಲವು ಪ್ರಕರಣಗಳಲ್ಲಿ ಹೈಕೋರ್ಟ್‌ನ ಬೇರೆ ಪೀಠಗಳು, ಇಂತಹದ್ದೇ ಮಧ್ಯಂತರ ಆದೇಶ ಮಾಡಿವೆ. ಹೀಗಾಗಿ, ಅದು ಈ ಅರ್ಜಿದಾರರಿಗೂ ಅನ್ವಯವಾಗಲಿವೆ ಎಂದು ಹೇಳಿ, ನ್ಯಾಯಾಲಯದ ಮುಂದೆ ಬಂದಿರುವ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನ್ಯಾಯಾಲಯದ ಮುಂದಿನ ಆದೇಶದವರೆಗೆ ಸದ್ಯ ಅವರು ಇರುವ ಕಡೆಯಿಂದ ಬೇರೆ ಕಡೆ ಸ್ಥಳಾಂತರ ಅಥವಾ ನಿಯೋಜನೆ ಮಾಡಬಾರದು ಎಂದು ಮಧ್ಯಂತರ ಆದೇಶ ನೀಡಿತು. ಅಲ್ಲದೆ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.