ಪೌರ ಕಾರ್ಮಿಕರ ಭವಿಷ್ಯ ನಿಧಿಯ 90 ಕೋಟಿ ಪಾವತಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

“ಪೌರಕಾರ್ಮಿಕರು ಸಮಾಜಕ್ಕೆ ಅಸಾಮಾನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಜಿದಾರರಿಗೆ ಸೂಕ್ತ ಮತ್ತು ದೈನಂದಿನ ಕೂಲಿಯನ್ನು ಸರ್ಕಾರ ಖಾತರಿಪಡಿಸಿದೆ” ಎಂದು ನ್ಯಾಯಾಲಯ ಹೇಳಿದೆ.
Karnataka High Court
Karnataka High Court
Published on

ಪೌರಕಾರ್ಮಿಕರ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ನಿಧಿಗೆ 90 ಕೋಟಿ ಠೇವಣಿ ಇಡುವಂತೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಹೊರಡಿಸಿರುವ ಆದೇಶವನ್ನು ಅನುಪಾಲಿಸುವಂತೆ ಬಿಬಿಎಂಪಿಗೆ ಈಚೆಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಬಿಬಿಎಂಪಿ ಪೌರಕಾರ್ಮಿಕ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ. ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ನೋಟಿಸ್‌ ನೀಡದೇ ಆದೇಶ ಮಾಡಿದ್ದಾರೆ ಎಂದು ಬಿಬಿಎಂಪಿಯು ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

“ಪೌರಕಾರ್ಮಿಕರು ಸಮಾಜಕ್ಕೆ ಅಸಾಮಾನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಜಿದಾರರಿಗೆ ಸೂಕ್ತ ಮತ್ತು ದೈನಂದಿನ ಕೂಲಿಯನ್ನು ಸರ್ಕಾರ ಖಾತರಿಪಡಿಸಿದೆ” ಎಂದು ನ್ಯಾಯಾಲಯ ಹೇಳಿದೆ.

“ಪೌರ ಕಾರ್ಮಿಕರು ಸಾರ್ವಜನಿಕ ಆರೋಗ್ಯ ಕಾಪಾಡುವುದನ್ನು ಪ್ರತಿದಿನವೂ ಮುಂದುವರಿಸಿದ್ದಾರೆ. ತಮ್ಮ ಆರೋಗ್ಯ ಮತ್ತು ಸುರಕ್ಷತೆಯ ಗಮನ ಇಟ್ಟುಕೊಳ್ಳದೇ ಅವರು ಈ ಕೆಲಸದಲ್ಲಿ ನಿರತವಾಗಿದ್ದಾರೆ. ಇದರಿಂದ ಅವರು ಹಲವು ಗಂಭೀರವಾದ ಉಸಿರಾಟ ಸಂಬಂಧಿ ರೋಗಗಳು, ಹೃದಯ ಸಮಸ್ಯೆ, ಬೆನ್ನು ಮತ್ತು ಕೀಲು ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೂ ತುತ್ತಾಗಿರುತ್ತಾರೆ. ಈ ಕೆಲಸದಲ್ಲಿ ನಿರತವಾಗುವ ಅವರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಉದ್ಯೋಗಿ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನಾ ಕಾಯಿದೆಯು ಕಲ್ಯಾಣ ಕಾನೂನಾಗಿದ್ದು, ಅದು ಸಮಾಜದ ಅಶಕ್ತ ಸಮುದಾಯದ ನೆರವಿಗಾಗಿ ರೂಪಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಉದ್ಯೋಗಿ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನಾ ಕಾಯಿದೆ ಸೆಕ್ಷನ್‌ 7ಎ ಅಡಿ 2011ರ ಜನವರಿಯಿಂದ 2017ರ ಜುಲೈ ಅವಧಿಯ 90,18,89,719 ಹಣ ಪಾವತಿಸುವಂತೆ ಪ್ರಾಧಿಕಾರವು ಬಿಬಿಎಂಪಿಗೆ ಆದೇಶಿಸಿತ್ತು. ಇದನ್ನು ಮರುಪರಿಶೀಲಿಸುವಂತೆ ಕೋರಿ ಬಿಬಿಎಂಪಿ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ವಜಾ ಮಾಡಲಾಗಿತ್ತು. ಅಂತಿಮವಾಗಿ ಬಿಬಿಎಂಪಿಯು ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಲಾಗಿತ್ತು.

ಕೆಲಸಗಾರರಿಗೆ ಬಿಬಿಎಂಪಿಯು ಭವಿಷ್ಯ ನಿಧಿ ಪಾಸ್‌ಬುಕ್‌, ಖಾತೆ ವಿವರ, ಕೊಡುಗೆ ಕಾರ್ಡ್‌ (ಕಾಂಟ್ರ್ಯಿಬ್ಯೂಷನ್‌) ನೀಡದೆ ಇದ್ದುದು ಮತ್ತು ಗುತ್ತಿಗೆದಾರ ಭವಿಷ್ಯ ನಿಧಿ ಪಾಲನ್ನು ಪಾವತಿಸದೆ ಇದ್ದುದು ಮತ್ತು ಕೆಲಸಗಾರರ ವಾರ್ಷಿಕ ಲೆಕ್ಕ ದಾಖಲೆ ತಡೆ ಹಿಡಿದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು.

ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನಾ ಕಾಯಿದೆ ಪಾಲಿಸುವಂತೆ ಬಿಬಿಎಂಪಿಗೆ ಆದೇಶಿಸಬೇಕು ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘವು ಪ್ರಾಧಿಕಾರದ ಕದತಟ್ಟಿತ್ತು. ಈ ಸಂದರ್ಭದಲ್ಲಿ ಸಲ್ಲಿಸಿದ್ದ ವರದಿಗಳು ಮತ್ತು ದಾಖಲೆ ಆಧರಿಸಿ ಪ್ರಾಧಿಕಾರ ಆದೇಶ ಮಾಡಿತ್ತು. ಆನಂತರ ಬಿಬಿಎಂಪಿಯು ಪ್ರಾಧಿಕಾರದ ಆದೇಶ ಪ್ರಶ್ನಿಸಿದ್ದನ್ನು 2018ರ ಜನವರಿ 8ರಂದು ವಜಾ ಮಾಡಲಾಗಿತ್ತು.

ಅರ್ಜಿದಾರರ ಪರವಾಗಿ ಮೈತ್ರೇಯಿ ಕೃಷ್ಣನ್‌, ಅವನಿ ಚೋಕ್ಸಿ ವಾದಿಸಿದ್ದರು.

Attachment
PDF
BBMP Powrakarmikara Snagha Vs BBMP.pdf
Preview
Kannada Bar & Bench
kannada.barandbench.com