ರಾಜ್ಯದಿಂದ ವಾರಕ್ಕೆ 35 ಲಕ್ಷ ಕೋವಿಡ್‌ ಲಸಿಕೆಗೆ ಬೇಡಿಕೆ; ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಹೈಕೋರ್ಟ್‌ ನಿರ್ದೇಶನ

ರಾಜ್ಯಕ್ಕೆ ಪ್ರತಿ ವಾರ 35 ಲಕ್ಷ ಡೋಸ್‌ ಲಸಿಕೆಯನ್ನು ಕೇಂದ್ರ ಸರ್ಕಾರ ಪೂರೈಸಿದರೆ ರಾಜ್ಯದಲ್ಲಿನ ಎಲ್ಲರಿಗೂ ಮೂರು ತಿಂಗಳ ಒಳಗಾಗಿ ಎರಡು ಡೋಸ್‌ ಲಸಿಕೆ ನೀಡಬಹುದು ಎಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆಯಲ್ಲಿ ರಾಜ್ಯ ಸರ್ಕಾರ ತಿಳಿಸಿದೆ.
Karnataka High Court, Vaccination
Karnataka High Court, Vaccination

ಕೋವಿಡ್‌ ನಿಯಂತ್ರಿಸುವ ಸಂಬಂಧ ಪ್ರತಿ ವಾರ 35 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಪೂರೈಸುವಂತೆ ಕೋರಿ ರಾಜ್ಯ ಸರ್ಕಾರವು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. ರಾಜ್ಯ ಸರ್ಕಾರವು ಆಗಸ್ಟ್‌ 4ರಂದು ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ನೇತೃತ್ವದ ವಿಶೇಷ ವಿಭಾಗೀಯ ಪೀಠವು ನಡೆಸಿತು.

ರಾಜ್ಯದಲ್ಲಿ 34.48 ಲಕ್ಷ ಫಲಾನುಭವಿಗಳು ಎರಡನೇ ಡೋಸ್‌ ಪಡೆಯುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಮಿತಿಯನ್ನು ಮೀರಿದ್ದಾರೆ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ವಿವರಿಸಿತು.

ರಾಜ್ಯ ಸರ್ಕಾರಕ್ಕೆ ಪ್ರತಿ ವಾರ 35 ಲಕ್ಷ ಡೋಸ್‌ಗಳನ್ನು ಕೇಂದ್ರ ಸರ್ಕಾರವು ಪೂರೈಸಿದರೆ ಎಲ್ಲರಿಗೂ ಮೂರು ತಿಂಗಳ ಒಳಗಾಗಿ ಎರಡೂ ಡೋಸ್ ಲಸಿಕೆ ನೀಡಬಹುದಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ರಾಜ್ಯ ಸರ್ಕಾರ ತಿಳಿಸಿದೆ.

Also Read
[ಕೋವಿಡ್‌] ಮುಂಚೂಣಿ ಕಾರ್ಯಕರ್ತರ ವಿಭಾಗಕ್ಕೆ ಬೋಧಕರು, ಬೋಧಕತೇರರನ್ನು ಸೇರಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಕೋವಿಶೀಲ್ಡ್‌ ಮೊದಲ ಡೋಸ್‌ ಪಡೆದ 27.22 ಲಕ್ಷ ಫಲಾನುಭವಿಗಳು 12 ವಾರಗಳನ್ನು ಪೂರೈಸಿದ್ದಾರೆ. ಕೋವ್ಯಾಕ್ಸಿನ್‌ ಮೊದಲ ಡೋಸ್‌ ಪಡೆದ 7.26 ಲಕ್ಷ ಫಲಾನುಭವಿಗಳು ನಾಲ್ಕು ವಾರಗಳನ್ನು ಪೂರೈಸಿದ್ದಾರೆ ಎಂದು ರಾಜ್ಯ ಸರ್ಕಾರವು ಪೀಠಕ್ಕೆ ಮಾಹಿತಿ ನೀಡಿದೆ.

ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳು ನಿರ್ದಿಷ್ಟ ಸಮಯದವರೆಗೆ ಪರಿಣಾಮಕಾರಿ ಎಂದಾದರೆ ಉಳಿದ ಡೋಸ್‌ಗಳನ್ನು ನೀಡುವ ಸಂಬಂಧದ ಕಾರ್ಯಯೋಜನೆಗೆ ಅಗತ್ಯ ಬದಲಾವಣೆ ಮಾಡಬೇಕಿದೆ ಎಂದು ಪೀಠವು ಹೇಳಿದೆ.

ರಾಜ್ಯದ ಎಲ್ಲಾ ಬೋಧಕ ಮತ್ತು ಬೋಧಕೇತರರಿಗೆ ಶೇ. 84.1ರಷ್ಟು ಲಸಿಕೆ ನೀಡಲಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ಇದೇ ವೇಳೆ ಮಾಹಿತಿ ನೀಡಿತು.

Related Stories

No stories found.
Kannada Bar & Bench
kannada.barandbench.com