ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾ ಪತಿ ಜತಿನ್‌ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗದಂತೆ ಡಿಆರ್‌ಐಗೆ ಹೈಕೋರ್ಟ್‌ ಸೂಚನೆ

ಮಾರ್ಚ್‌ 4ರಂದು ಡಿಆರ್‌ಐ ಅಧಿಕಾರಿಗಳು ಕಸ್ಟಮ್ಸ್‌ ಕಾಯಿದೆ ಸೆಕ್ಷನ್‌ 108ರ ಅಡಿ ಸಮನ್ಸ್‌ ಜಾರಿ ಮಾಡಿದ್ದರು. ಇದರ ಭಾಗವಾಗಿ ಜಿತಿನ್‌ ವಿಚಾರಣೆಯಲ್ಲಿ ಭಾಗಿಯಾಗಿದ್ದರು.
Ranya Rao
Ranya Rao
Published on

ಕೋಟ್ಯಂತರ ಮೌಲ್ಯದ ಚಿನ್ನ ಕಳ್ಳಸಾಗಣೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ಅವರ ಪತಿ ಜತಿನ್‌ ವಿಜಯಕುಮಾರ್ ಹುಕ್ಕೇರಿ ಅವರನ್ನು ಕಾನೂನು ಪ್ರಕ್ರಿಯೆ ಪಾಲಿಸದೆ ಬಂಧಿಸುವಂತಿಲ್ಲ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಬಲವಂತದ ಕ್ರಮಕೈಗೊಳ್ಳದಂತೆ ಡಿಆರ್‌ಐಗೆ ನಿರ್ದೇಶಿಸುವಂತೆ ಕೋರಿ ರನ್ಯಾ ಪತಿ ಜತಿನ್‌ ವಿಜಯಕುಮಾರ್ ಹುಕ್ಕೇರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Hemant Chandangoudar
Justice Hemant Chandangoudar

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರು “ರನ್ಯಾ ವಿರುದ್ಧದ ಆರೋಪಕ್ಕೂ ಜತಿನ್ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅರ್ಜಿದಾರರಿಗೆ ಡಿಆರ್‌ಐ ಅಧಿಕಾರಿಗಳು ಸಮನ್ಸ್ ನೀಡಿದಾಗ ತನಿಖೆಗೆ ಸಹಕರಿಸಿದ್ದಾರೆ. ಆದ್ದರಿಂದ, ಅವರ ವಿರುದ್ಧ ಪೊಲೀಸರು ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಮತ್ತು ಸೂಕ್ತ ರೀತಿಯಲ್ಲಿ ಕಾನೂನು ಪಾಲಿಸಲು ನಿರ್ದೇಶಿಸಬೇಕು” ಎಂದು ಕೋರಿದರು.

Also Read
ಚಿನ್ನ ಕಳ್ಳ ಸಾಗಣೆ ಪ್ರಕರಣ: ಮಾರ್ಚ್‌ 24ರವರೆಗೆ ರನ್ಯಾ ರಾವ್‌ಗೆ ನ್ಯಾಯಾಂಗ ಬಂಧನ

ಇದನ್ನು ಪುರಸ್ಕರಿಸಿದ ಪೀಠವು “ಅರ್ಜಿದಾರರನ್ನು ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೇ ಬಂಧಿಸಬಾರದು” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

ಮಾರ್ಚ್‌ 4ರಂದು ಡಿಆರ್‌ಐ ಅಧಿಕಾರಿಗಳು ಕಸ್ಟಮ್ಸ್‌ ಕಾಯಿದೆ ಸೆಕ್ಷನ್‌ 108ರ ಅಡಿ ಸಮನ್ಸ್‌ ಜಾರಿ ಮಾಡಿದ್ದರು. ಇದರ ಭಾಗವಾಗಿ ಜತಿನ್‌ ವಿಚಾರಣೆಯಲ್ಲಿ ಭಾಗಿಯಾಗಿದ್ದರು.

Kannada Bar & Bench
kannada.barandbench.com