ಬರೋಬ್ಬರಿ 50 ವರ್ಷಗಳ ಹಿಂದೆ ರಾಜಕಾಲುವೆ ಇತ್ತು ಎಂಬ ಕಾರಣಕ್ಕೆ ಆನೇಕಲ್ ತಾಲ್ಲೂಕಿನ ಅಳಿಬೊಮ್ಮಸಂದ್ರ ಮತ್ತು ಮುತಾನಲ್ಲೂರು ಅಮಾನಿಕೆರೆ ಗ್ರಾಮದ ನಡುವೆ ಹಾದುಹೋಗುವ ರಸ್ತೆಯ ತೆರವಿಗೆ ಮುಂದಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಆನೇಕಲ್ ತಹಸೀಲ್ದಾರ್ ಕ್ರಮಕ್ಕೆ ಈಚೆಗೆ ತಡೆ ಹಾಕಿರುವ ಕರ್ನಾಟಕ ಹೈಕೋರ್ಟ್, ರಸ್ತೆ ತೆರವು ಕಾರ್ಯಾಚರಣೆ ಮುಂದುವರಿಸದಂತೆ ನಿರ್ದೇಶಿಸಿದೆ.
ಆನೇಕಲ್ ತಹಸೀಲ್ದಾರ್ ರಸ್ತೆ ತೆರವಿಗೆ ಮುಂದಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಸರ್ಜಾಪುರ ಹೋಬಳಿಯ ಅಳಿಬೊಮ್ಮಸಂದ್ರ ಗ್ರಾಮದ ನಿವಾಸಿಯಾದ ಆರ್ ಸುಜಾತ ಮತ್ತಿತರರು ಮೇಲ್ಮನವಿ ಸಲ್ಲಿಸಿ, ತುರ್ತು ವಿಚಾರಣೆಗೆ ಕೋರಿದ್ದರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಜೆಯಿದ್ದರೂ ಮೇಲ್ಮನವಿದಾರರ ಮನವಿ ಮೇರೆಗೆ ಮಾರ್ಚ್ 19ರಂದು ಮಧ್ಯಾಹ್ನ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ಅನಂತ ರಾಮನಾಥ ಹೆಗ್ಡೆ ಅವರ ವಿಭಾಗೀಯ ಪೀಠವು ತುರ್ತು ವಿಚಾರಣೆ ನಡೆಸಿತು.
ಮೇಲ್ಮನವಿದಾರರ ಪರ ವಕೀಲ ಎ ಮಧುಸೂದನ ರಾವ್ ಅವರು “ಮೇಲ್ಮನವಿದಾರರು ಅಳಿಬೊಮ್ಮಸಂದ್ರ ಗ್ರಾಮದ ಸರ್ವೇ ನಂ. 21ರಲ್ಲಿನ ಮೂರು ಎಕೆರೆ 15 ಗುಂಟೆ ಜಮೀನಿನ ಮಾಲೀಕರಾಗಿದ್ಧಾರೆ. ಜಮೀನು ದಕ್ಷಿಣ ಕಡೆಯಿಂದ ಮುತಾನಲ್ಲೂರು ಅಮಾನಿಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 30 ಅಡಿ ವಿಸ್ತೀರ್ಣದ ರಸ್ತೆ ಹಾದು ಹೋಗಲಿದೆ. ಆದರೆ, 50 ವರ್ಷಗಳ ಹಿಂದೆ ಈ ರಸ್ತೆಯಿರುವ ಜಾಗ ಕಾಲುವೆ ಇತ್ತು. ಕಾಲುವೆ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಿಂದ ರಸ್ತೆ ತೆರವುಗೊಳಿಸುವಂತೆ ಸೂಚಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆನೇಕಲ್ ತಹಸೀಲ್ದಾರ್‌ಗೆ 2025ರ ಜನವರಿ 21ರಂದು ಪತ್ರ ಬರೆದಿದ್ದರು” ಎಂದು ವಿವರಿಸಿದರು.
ಅಲ್ಲದೆ, ಈ ಪತ್ರ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು ಪತ್ರವು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ನಡುವಿನ ಆಂತರಿಕ ಸಂವಹನವಾಗಿದೆ. ರಸ್ತೆಯ ಜಾಗವು ಕಾಲುವೆಗೆ ಸೇರಿದ್ದಾಗಿದ್ದು, ರಸ್ತೆ ತೆರವುಗೊಳಿಸಬೇಕು ಎಂಬ ಉದ್ದೇಶವು ಅಧಿಕಾರಿಗಳು ಹೊಂದಿದ್ದರೆ, ಆ ಸಂಬಂಧ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿದೆ. ವಿಸ್ತೃತ ಆದೇಶವು ಇನ್ನೂ ಬಿಡುಗಡೆಯಾಗದಿದ್ದರೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾರ್ಚ್ 18 ಮತ್ತು 19ರಂದು ಹೈಕೋರ್ಟ್ ಕಾರ್ಯ ನಿರ್ವಹಿಸುವುದಿಲ್ಲ ಎಂಬ ಉದ್ದೇಶದಿಂದ ಅಧಿಕಾರಿಗಳು ರಸ್ತೆ ತೆರವುಗೊಳಿಸುತ್ತಿದ್ದಾರೆ. ಈಗಾಗಲೇ ರಸ್ತೆಯ ಡಾಂಬರು ಕಿತ್ತುಹಾಕಲಾಗಿದೆ. ವಾಸ್ತವವಾಗಿ ರಸ್ತೆ ಜಾಗದಲ್ಲಿ ಕಾಲುವೆ ಇರಲಿಲ್ಲ. ಇದೀಗ ರಸ್ತೆ ತೆರವುಗೊಳಿಸಿದರೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಈಗಾಗಲೇ ಈ ಸುತ್ತಲಿ ಜಾಗದಲ್ಲಿ ಸರ್ಕಾರದ ಅಮೋದನೆಯೊಂದಿಗೆ ಲೇಔಟ್ ನಿರ್ಮಿಸಲಾಗಿದೆ ಎಂದು ವಿವರಿಸಿ ಫೋಟೊ ಸಲ್ಲಿಸಿದರು.
ಸರ್ಕಾರದ ಪರ ವಕೀಲರು, ಪ್ರಕರಣ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಸಲ್ಲಿಸಿದ ನಂತರ ಮೇಲ್ಮನವಿ ವಿಚಾರಣೆ ನೆಡಸಬೇಕು ಎಂದು ಕೋರಿದರು.
ಮೇಲ್ಮನವಿದಾರರು ಸಲ್ಲಿಸಿದ ಫೋಟೊಗಳನ್ನು ಪರಿಶೀಲಿಸಿದ ಪೀಠವು ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಅವರು ಏಕಸದಸ್ಯ ಪೀಠದ ಆದೇಶಕ್ಕೆ ಕಾಯಬೇಕೇ ಮತ್ತು ಕಾಯುವ ಅಗತ್ಯವಿಲ್ಲದಿದ್ದರೆ, ವಿಶೇಷವಾಗಿ ನ್ಯಾಯಾಲಯದ ಕಲಾಪಗಳು ನಡೆಯದ ಮಾರ್ಚ್ 18 ಅಥವಾ 19ನೇ ದಿನವನ್ನು ರಸ್ತೆ ತೆರವಿಗೆ ಆಯ್ಕೆ ಮಾಡಬಹುದೇ? ಎಂದು ಪ್ರಶ್ನೆ ಎತ್ತಿತು.
ಅಲ್ಲದೆ, ಆದೇಶ ಪ್ರತಿಗೆ ಕಾಯದೆ ರಸ್ತೆ ತೆರವಿಗೆ ಮಾರ್ಚ್ 18 ಮತ್ತು 19 ಅನ್ನು ಏಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬ ಬಗ್ಗೆ ವಿವರಣೆ ನೀಡಿ ತಹಸೀಲ್ದಾರ್ ಅವರು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು. ಇನ್ನೂ ಜಿಲ್ಲಾಧಿಕಾರಿ, ತಹಸೀಲ್ದಾರ್ ಅಥವಾ ಸಂಬಂಧಪಟ್ಟ ಪೊಲೀಸರಾಗಲಿ ಮುಂದಿನ ವಿಚಾರಣೆವರೆಗೆ ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳಬಾರದು. ತಹಶೀಲ್ದಾರ್ ಅವರು ಈ ರಸ್ತೆಯು ಸಂಚಾರಯೋಗ್ಯವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಮುಕ್ತರಾಗಿದ್ದಾರೆ ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿತು.