ಇ-ಖಾತಾ ಅರ್ಜಿ ನಿರ್ದಿಷ್ಟ ಅವಧಿಯಲ್ಲಿ ವಿಲೇವಾರಿ ಮಾಡಲು ಸೂಕ್ತ ವಿಧಾನ ಜಾರಿ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಇ-ಸುಗಮ ನಿಯಮಗಳ ಪ್ರಕಾರ ಇ-ಖಾತೆಗೆ ಸಲ್ಲಿಸಿದ ಅರ್ಜಿಯನ್ನು ಮೂವತ್ತು ದಿನಗಳಲ್ಲಿ ವಿಲೇವಾರಿ ಮಾಡಬೇಕು. ಮೂವತ್ತು ದಿನಗಳ ನಂತರ ತಡವಾದರೆ ಅದಕ್ಕೆ ಕಾರಣವನ್ನೂ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಬೇಕು.
Karnataka HC and Justice Suraj Govindaraj
Karnataka HC and Justice Suraj Govindaraj

ಕೈಬರಹದ ಖಾತೆ (ಆಸ್ತಿಯ ದಾಖಲೆ) ನೀಡಿ ಇ-ಖಾತೆಗಾಗಿ ಅರ್ಜಿ ಸಲ್ಲಿಸಿದ ಅಲ್ಪ ಅವಧಿಯಲ್ಲಿಯೇ ಇ-ಖಾತೆಯನ್ನು ನೀಡಬೇಕು. ಇಲ್ಲವಾದರೆ ಇ-ಖಾತೆ ನೀಡುವ ವ್ಯವಸ್ಥೆ ಜಾರಿಯ ಉದ್ದೇಶವೇ ವಿಫಲವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಬೆಂಗಳೂರಿನ ರೇಣುಕಾ ಮಂಗ್ನಾನಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ಕೈಬರಹದ ಖಾತೆ ನೀಡಿದ ಬಳಿಕ 2019ರ ಫೆಬ್ರವರಿ 16ರಂದು ಇ-ಖಾತೆಗೆ ಕೋರಿ ರೇಣುಕಾ ಅವರು ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಅದನ್ನು ನೀಡದಿರುವುದನ್ನು ಪರಿಗಣಿಸಿ ನ್ಯಾಯಾಲಯವು ಆದೇಶ ಮಾಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ವೆಬ್‌ಸೈಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯ ಪರಿಗಣನೆ, ಮುಂದುವರಿಕೆ, ವಿಲೇವಾರಿಗೆ ಸೂಕ್ತ ವಿಧಾನವನ್ನು ಅಭಿವೃದ್ಧಿಪಡಿಸಿ ಜಾರಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಅವರಿಗೆ ನ್ಯಾಯಾಲಯವು ನಿರ್ದೇಶಿಸಿದೆ.

“ವೆಬ್‌ಸೈಟಿನಲ್ಲಿ ಅರ್ಜಿದಾರರ ಹೆಸರು, ಆಸ್ತಿಯ ವಿವರಣೆ, ಇ-ಖಾತೆಗೆ ಅರ್ಜಿ ಸಲ್ಲಿಸಲಾದ ದಿನಾಂಕ, ಇ-ಖಾತಾ ನೀಡಿದ ದಿನಾಂಕದ ಸಾಮಾನ್ಯ ಮಾಹಿತಿ ಕಾಣುವಂತಿರಬೇಕು. ಇ-ಸುಗಮ ನಿಯಮಗಳ ಪ್ರಕಾರ ಇ-ಖಾತೆಗೆ ಅರ್ಜಿ ಸಲ್ಲಿಸಿದ ಅರ್ಜಿಯನ್ನು ಮೂವತ್ತು ದಿನಗಳಲ್ಲಿ ವಿಲೇವಾರಿ ಮಾಡಬೇಕು. ಮೂವತ್ತು ದಿನಗಳ ನಂತರ ತಡವಾದರೆ ಅದಕ್ಕೆ ಕಾರಣವನ್ನೂ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಖಾತೆಯು ಹಕ್ಕಿನ ದಾಖಲೆ ಅಲ್ಲದಿದ್ದರೂ ಆಸ್ತಿಯನ್ನು ಉತ್ತಮ ರೀತಿಯಲ್ಲಿ ಅನುಭವಿಸಲು ಇದು ಅಗತ್ಯವಾಗಿದ್ದು, ಆ ರೀತಿ ಆಸ್ತಿ ಅನುಭವಿಸುವುದನ್ನು ತಡ ಮಾಡಲಾಗದು ಎಂದು ನ್ಯಾಯಾಲಯವು ಹೇಳಿದೆ.

“2019ರಲ್ಲಿ ಅರ್ಜಿ ಸಲ್ಲಿಸಿದ್ದರೂ ಅದು ಇನ್ನೂ ಪರಿಗಣನೆಗೆ ಬಾಕಿ ಇದ್ದು, ಆಕೆಯ ಅಹವಾಲು ಪರಿಹರಿಸಲು ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರುವಂತೆ ಆಗಿರುವುದು ಆಘಾತಕಾರಿ” ಎಂದಿರುವ ನ್ಯಾಯಾಲಯವು ಮೂರು ವಾರಗಳಲ್ಲಿ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ದೊಡ್ಡಜಾಲ ಗ್ರಾಮ ಪಂಚಾಯಿತಿಗೆ ನಿರ್ದೇಶಿಸಿದ್ದು, ಏಪ್ರಿಲ್‌ 6ರ ಒಳಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಆದೇಶ ಮಾಡಿದೆ.

Kannada Bar & Bench
kannada.barandbench.com