ಚುನಾಯಿತ ಸದಸ್ಯರ ಅವಧಿ ಪೂರ್ಣಗೊಳ್ಳುವವರೆಗೆ ಆಡಳಿತಾಧಿಕಾರಿ ನೇಮಕ ಬೇಡ: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಕೆಲ ಸ್ಥಳೀಯ ಸಂಸ್ಥೆಗಳ ಮೊದಲ ಅವಧಿಯ 30 ತಿಂಗಳ ಬಳಿಕ ಎರಡನೇ ಅವಧಿಯ 30 ತಿಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಯ ವಿಳಂಬದಿಂದಾಗಿ ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು.
High Court of Karnataka
High Court of Karnataka
Published on

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರಸಭೆ, ಹಾಸನ ಜಿಲ್ಲೆ ಹೊಳೆನರಸೀಪುರ ಪುರಸಭೆ, ಮಂಡ್ಯ ಜಿಲ್ಲೆ ಮಳವಳ್ಳಿ ಪುರಸಭೆ, ಕೋಲಾರ ಜಿಲ್ಲೆ ಮುಳಬಾಗಿಲು ಹಾಗೂ ಚಿಕ್ಕಬಳ್ಳಾಪುರ ನಗರಸಭೆಗಳ ಚುನಾಯಿತ ಸದಸ್ಯರ ಅವಧಿ ಪೂರ್ಣಗೊಳ್ಳುವ ತನಕ ಈ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಚುನಾಯಿತ ಸದಸ್ಯರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಆರ್ ನಟರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಅರ್ಜಿ ಸಲ್ಲಿಸಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಅವಧಿ ಮುಗಿಯುವ ತನಕ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬಾರದು” ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿತು.

ಪ್ರಕರಣದ ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಆಯಾ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 16ಕ್ಕೆ ಮುಂದೂಡಿತು. ಅಂತೆಯೇ, ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿ ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

ಐದು ವರ್ಷದ ಅವಧಿಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು.  ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಒಂದು ಬಾರಿಗೆ 30 ತಿಂಗಳಂತೆ ಎರಡು ಅವಧಿ ನಿಗದಿಯಾಗಿತ್ತು. ಮೊದಲ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದು, ಸ್ಥಳೀಯ ಸಂಸ್ಥೆಯ ಮೊದಲ ಸಭೆ ನಡೆದ ದಿನದಿಂದ ಮುಂದಿನ ಐದು ವರ್ಷ ಚುನಾಯಿತ ಸದಸ್ಯರ ಅವಧಿ ಇರುತ್ತದೆ. ಮೊದಲ ಅವಧಿಯ 30 ತಿಂಗಳ ಬಳಿಕ ಎರಡನೇ ಅವಧಿಯ 30 ತಿಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಯ ಮೀಸಲಾತಿ ನಿಗದಿಯ ವಿಳಂಬದಿಂದಾಗಿ ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಹೀಗಾಗಿ, ಎರಡನೇ ಅವಧಿಯಲ್ಲಿ 30 ತಿಂಗಳು ಅಧಿಕಾರವಧಿ ಸಿಗುವುದಿಲ್ಲ. ಆದ್ದರಿಂದ, ಆಡಳಿತಾಧಿಕಾರಿ ನೇಮಕ ಆಗಿದ್ದ ಅವಧಿಯನ್ನು ನಮ್ಮ ಒಟ್ಟು ಅಧಿಕಾರವಧಿಗೆ ಪರಿಗಣಿಸಬಾರದು. ಅದೇ ರೀತಿ ಚುನಾಯಿತ ಸದಸ್ಯರ ಅವಧಿ ಮುಗಿದಿದೆ ಎಂದು ಆಡಳಿತಾಧಿಕಾರಿಗಳನ್ನು ನೇಮಕ ಮಾಡದಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಹೊಸದುರ್ಗದ ಎಸ್ ರಾಜೇಶ್ವರಿ ಸೇರಿದಂತೆ ಒಟ್ಟು 22 ಜನರು, ಹೊಳೆನರಸೀಪುರದ ಎ ಜಗನ್ನಾಥ್ ಸೇರಿದಂತೆ ಒಟ್ಟು 19 ಜನರು, ಚಿಕ್ಕಬಳ್ಳಾಪುರದ ಎಸ್‌ ಸುಮಾ ಸೇರಿದಂತೆ 30 ಜನರು, ಮಳವಳ್ಳಿಯ ಪುಟ್ಟಸ್ವಾಮಿ ಸೇರಿದಂತೆ ಒಟ್ಟು 23 ಜನರು ಮತ್ತು ಮುಳಬಾಗಿಲಿನ ಉಮ್ಮೇಹಾನಿ ಸೇರಿದಂತೆ ಒಟ್ಟು 27 ಜನಪ್ರತಿನಿಧಿಗಳು ಈ ಅರ್ಜಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com