The Karnataka High Court
The Karnataka High Court

ಘನತ್ಯಾಜ್ಯ ನಿರ್ವಹಣೆ: ಏಕರೂಪದ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“ಹಳೆಯ ವಿಧಾನದಲ್ಲಿಯೇ ಕಸ ವಿಲೇವಾರಿ ಪದ್ಧತಿ ಮುಂದುವರಿಸುವ ಬದಲು ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೊಂದಿದ ಹೊಸ ವಿಧಾನವೊಂದನ್ನು ರೂಪಿಸಬೇಕು. ‍ಇದನ್ನು ಹಂತ ಹಂತವಾಗಿ ಜಾರಿಗೊಳಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
Published on

“ವೈಜ್ಞಾನಿಕ ರೀತಿಯ ಘನತ್ಯಾಜ್ಯ ನಿರ್ವಹಣೆಗಾಗಿ ಏಕರೂಪದ, ತಂತ್ರಜ್ಞಾನ ಆಧಾರಿತ ವ್ಯವಸ್ಥೆಯೊಂದನ್ನು ರೂಪಿಸಬೇಕು” ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಈಚೆಗೆ ನಿರ್ದೇಶಿಸಿದೆ.

ಬೆಂಗಳೂರು ಮಹಾನಗರದ ಘನತ್ಯಾಜ್ಯ ವಿಲೇವಾರಿಯ 33 ಪ್ಯಾಕೇಜ್‌ಗಳಿಗೆ ಹೊರಡಿಸಿದ್ದ ಟೆಂಡರ್ ಪ್ರಶ್ನಿಸಿ ಹಲವು ಘನತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಹಳೆಯ ವಿಧಾನದಲ್ಲಿಯೇ ಕಸ ವಿಲೇವಾರಿ ಪದ್ಧತಿ ಮುಂದುವರಿಸುವ ಬದಲು ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೊಂದಿದ ಹೊಸ ವಿಧಾನವೊಂದನ್ನು ರೂಪಿಸಬೇಕು. ‍ಇದನ್ನು ಹಂತ ಹಂತವಾಗಿ ಜಾರಿಗೊಳಿಸಬೇಕು” ಎಂದು ಪೀಠವು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಎಲ್ಲಾ ಐದು ಪಾಲಿಕೆಗಳಿಗೆ ನಿರ್ದೇಶಿಸಿದೆ.

“ಜಿಬಿಎ ಮುಖ್ಯ ಆಯುಕ್ತ, ಐದೂ ನಿಗಮಗಳ ವಲಯ ಆಯುಕ್ತರು ಮತ್ತು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಒಳಗೊಂಡಂತೆ ಸಭೆ ನಡೆಸಬೇಕು. ಘನತ್ಯಾಜ್ಯ ನಿರ್ವಹಣೆಗಾಗಿ ಏಕೀಕೃತ ಮತ್ತು ಸಂಯೋಜಿತ ಡಿಜಿಟಲ್ ವೇದಿಕೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಅದರ ಅನುಷ್ಠಾನದ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು” ಎಂದು ನಿರ್ದೇಶಿಸಿದೆ.

“ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಸಂವಹನಗಳಿಗೆ ಆಡಳಿತ ತತ್ವವು ‘ಒಂದು ನಗರ, ಒಂದು ವೇದಿಕೆ‘ ಆಗಿರಬೇಕು. ಅದು ಎಲ್ಲಾ ನಾಗರಿಕರು, ನಿರ್ವಾಹಕರು ಮತ್ತು ಆಡಳಿತಗಾರರಿಗೆ ಸುಗಮವಾಗಿ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಬೇಕು” ಎಂದು ಪೀಠ ಸ್ಪಷ್ಟಪಡಿಸಿದೆ.

“ಸುಧಾರಣೆಗಾಗಿ ಸೂಚಿಸಲಾಗಿರುವ ಅಂಶಗಳಲ್ಲಿ ಡಿಜಿಟಲ್ ಡ್ಯಾಶ್‌ ಬೋರ್ಡ್, ಮೊಬೈಲ್ ಅಪ್ಲಿಕೇಶನ್, ಜಿಪಿಎಸ್ ಟ್ರ್ಯಾಕಿಂಗ್, ವೆಯ್‌ ಬ್ರಿಡ್ಜ್ ಏಕೀಕರಣ ವ್ಯವಸ್ಥೆ ಮತ್ತು ಸಿಸಿಟಿವಿ ಕಣ್ಗಾವಲು ಒಳಗೊಂಡಿವೆ. ಇವುಗಳನ್ನು ಪ್ರತ್ಯೇಕ ಅಥವಾ ಸ್ವತಂತ್ರ ಯೋಜನೆಗಳೆಂಬಂತೆ ನೋಡಬಾರದು. ಎಲ್ಲವೂ ಸುಸಂಘಟಿತ ಆಡಳಿತ ವ್ಯವಸ್ಥೆಯ ಪರಸ್ಪರ ಆಂತರಿಕ ಸಂಪರ್ಕ ಹೊಂದಿದ ಘಟಕಗಳಾಗಿರಬೇಕು” ಎಂದು ಪೀಠ ಆದೇಶಿಸಿದೆ.

“ನಾಗರಿಕರು ಕಸವನ್ನು ಸರಿಯುವ ಬ್ಲಾಕ್ ಸ್ಪಾಟ್‌ಗಳ ಬಗ್ಗೆ ಅಪ್ಲಿಕೇಶನ್ ಮೂಲಕ ಮಾಹಿತಿ ನೀಡಿದರೆ ಅದರ ಮೇಲೆ ಕಣ್ಗಾವಲು ಇರಿಸುವ ವ್ಯವಸ್ಥೆಯಾಬೇಕು. ಇದಕ್ಕಾಗಿ ಸಿಸಿಟಿವಿ ನೆಟ್‌ವರ್ಕ್‌ನಲ್ಲಿ ಸೆರೆಹಿಡಿದ ಚಿತ್ರಗಳನ್ನು ಆಧರಿಸಿ ಸಾಕ್ಷ್ಯ ಸಂಗ್ರಹಿಸಬೇಕು. ಅಂತಹವರ ವಿರುದ್ಧ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಜಾರಿ ಮಾದರಿಗಳ ಮೂಲಕ ದಂಡ  ವಿಧಿಸಬೇಕು. ಇಂತಹ ಜಾಗಗಳ ಮೇಲೆ ನಿರಂತರ ಕಣ್ಣಿಟ್ಟಿರಬೇಕು” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಆದಷ್ಟು ಬೇಗ 'ನೋಡಲ್ ಮೇಲ್ವಿಚಾರಣಾ ಮತ್ತು ಅನುಷ್ಠಾನ ಸಮಿತಿ' ರಚಿಸಬೇಕು ಎಂದೂ ಪೀಠ ನಿರ್ದೇಶಿಸಿದೆ. “ಇದರ ಸಂಯೋಜನೆ, ನ್ಯಾಯವ್ಯಾಪ್ತಿಯ ಸಂಘರ್ಷಗಳನ್ನು ಪೂರ್ವಭಾವಿಯಾಗಿ ನಿವಾರಿಸಲು ಮತ್ತು ಸಂಕೀರ್ಣ ನಗರ ಯೋಜನೆಗಳಿಗೆ ಅಡ್ಡಿಯಾಗುವ ಅಧಿಕಾರಶಾಹಿ ಅಡೆತಡೆಗಳನ್ನು ನಿವಾರಿಸುವಂತೆ ಇರಬೇಕು” ಎಂದು ಸೂಚಿಸಿದೆ.

ಹೊಸ ಟೆಂಡರ್‌ಗೆ ಒಪ್ಪಿಗೆ: ಬೃಹತ್‌ ಬೆಂಗಳೂರು ಮಹಾನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ ಸರ್ಕಾರ 2025ರ ಜುಲೈ 30ರಂದು ಹೊಸದಾಗಿ ಕರೆದಿದ್ದ ಟೆಂಡರ್‌ಗೆ ಪೀಠ ಇದೇ ವೇಳೆ ಅಸ್ತು ಎಂದಿದೆ.

ಹೊಸ ಟೆಂಡರ್‌ ನಿಯಮ ಹಾಗೂ ಷರತ್ತುಗಳನ್ನು ಪ್ರಶ್ನಿಸಿ ಹಲವು ಹಾಲಿ ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠ, ಟೆಂಡರ್ ಪ್ರಕ್ರಿಯೆಗಳನ್ನು ಮುಂದುವರಿಸಲು ಅವಕಾಶ ಕಲ್ಪಿಸಿದೆ.

“ವಾರ್ಡ್‌ವಾರು ಇದ್ದ ಟೆಂಡರ್ ಪ್ರಕ್ರಿಯೆಯನ್ನು ಹಲವು ವಾರ್ಡ್‌ಗಳಿಗೆ ವಿಸ್ತರಿಸಿರುವ ಕ್ರಮ ಏಕಪಕ್ಷೀಯ ಅಥವಾ ಸಕಾರಣವಿಲ್ಲದ ಟೆಂಡರ್‌ ಎಂದು ಹೇಳಲಾಗದು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಹೊಸ ಟೆಂಡರ್ ನಿಯಮಗಳಲ್ಲಿ ಹಣಕಾಸು ಮತ್ತು ತಾಂತ್ರಿಕ ಅಗತ್ಯಗಳಲ್ಲಿ ಬದಲಾವಣೆ, ಅರ್ಜಿದಾರರು ಒಟ್ಟಾಗಿ ಸೇರಿ ಟೆಂಡರ್ ಸಲ್ಲಿಕೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.

“ನ್ಯಾಯಾಲಯದ ಮೆಟ್ಟಿಲೇರಿದ್ದ ಗುತ್ತಿಗೆದಾರರಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಟೆಂಡರ್‌ಗೆ ನಿಗದಿಪಡಿಸಿರುವ ದಿನಾಂಕವನ್ನು ನವೆಂಬರ್ 10ರವರೆಗೆ ವಿಸ್ತರಿಸಬೇಕು” ಎಂದೂ ಪೀಠ ಇದೇ ವೇಳೆ ಸರ್ಕಾರಕ್ಕೆ ನಿರ್ದೇಶಿಸಿದೆ.

Kannada Bar & Bench
kannada.barandbench.com