ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ₹6,700 ಕೋಟಿ ಖರ್ಚಿನ ವಿವರ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ನ್ಯಾ. ನಾಗಪ್ರಸನ್ನ ಅವರು 2024ರ ಏ.23ರಂದು ನಾಲ್ಕು ವಾರದೊಳಗೆ ಎಲ್‌ಎಲ್‌ಬಿ ಹಾಗೂ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಬೇಕು ಎಂದು ಆದೇಶಿಸಿದ್ದರು.
Justice M Nagaprasanna
Justice M Nagaprasanna

ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕಾಗಿ ₹6,700 ಕೋಟಿ ಹೇಗೆ ಬಳಕೆಯಾಗಿದೆ ಎಂಬ ಬಗ್ಗೆ ವಿವರ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಾಕೀತು ಮಾಡಿದೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ ಮಹಾಂತೇಶ್‌ ಹಾಗೂ ಇತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ವರ್ಗದಲ್ಲಿ ಶೈಕ್ಷಣಿಕ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದ ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ತಕ್ಷಣವೇ ನೆರವು ನೀಡಲು ಜಾರಿ ಮಾಡಿದ್ದ ಮಧ್ಯಂತರ ಆದೇಶ ಪಾಲನೆ ಮಾಡದ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಉದಾಸೀನ ನಿಲುವನ್ನು ನ್ಯಾಯಾಲಯವು ತೀವ್ರ ತರಾಟೆಗೆ ತೆಗೆದುಕೊಂಡಿತು.

“ಬಿಸಿಲು, ಮಳೆ ಎನ್ನದೆ ಶ್ರಮಪಡುವ ಕಟ್ಟಡ ಕಾರ್ಮಿಕರ ದುಡಿಮೆಯಿಂದಾಗಿ ಸಾವಿರಾರು ಕೋಟಿ ರೂಪಾಯಿ ಸೆಸ್ ಸಂಗ್ರಹವಾಗುತ್ತಿದ್ದರೂ ಅದನ್ನು ಅವರ‌ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು‌ ಮಾಡದೆ, ಅಧಿಕಾರಿಗಳು ಐಷಾರಾಮಿ ಜೀವನ ಸಾಗಿಸುತ್ತಿರುವುದು ದುರದೃಷ್ಟಕರ” ಎಂದು ಮೌಖಿಕವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು ಮುಂದಿನ ವಿಚಾರಣೆ ವೇಳೆ ಈ ಕುರಿತ ವಿವರ ಸಲ್ಲಿಸಬೇಕು ಎಂದು ಆದೇಶಿಸಿತು.

ಪ್ರಕರಣದ ಹಿನ್ನೆಲೆ: 2024ರ ಏಪ್ರಿಲ್‌ 23ರಂದು ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನಾಲ್ಕು ವಾರದೊಳಗೆ ಎಲ್‌ಎಲ್‌ಬಿ ಹಾಗೂ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡಸಹಿತ ಶೈಕ್ಷಣಿಕ ಧನಸಹಾಯ ಪಾವತಿಸಬೇಕು ಎಂದು ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಆದೇಶಿಸಿದ್ದರು.

ಈ ಆದೇಶದ ನಂತರ ಅರ್ಜಿಯು ಜೂನ್‌ 7ರಂದು ವಿಚಾರಣೆಗೆ ನಿಗದಿಯಾಗಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ ಅವರು ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಪಾಲನೆಯಾಗಿಲ್ಲ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದಿದ್ದರು.

ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ಜಾರಿ ಮಾಡಲು ವಿಫಲವಾದ‌ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ವಿರುದ್ದ ಕಿಡಿ ಕಾರಿದರು. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ₹6,700 ಕೋಟಿ ಸೆಸ್, ಅದು ಹೊಂದಿರುವ‌ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಯಾವ ಸೌಲಭ್ಯಗಳಿಗೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎನ್ನುವ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸಿ ಎಂದು ಆದೇಶಿಸಿದರು. ವಿಚಾರಣೆಯನ್ನು ಜೂನ್‌ 14ಕ್ಕೆ ಮುಂದೂಡಲಾಗಿದೆ. 

Kannada Bar & Bench
kannada.barandbench.com