ಜಿಲ್ಲಾ, ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚುವರಿ ಸೂಚನಾ ಫಲಕ ಅಳವಡಿಕೆಗೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬೀದರ್‌ ಮೂಲದ ಗುರುನಾಥ್‌ ವಡ್ಡೆ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಲೇವಾರಿ ಮಾಡಿತು.
High Court of Karnataka
High Court of Karnataka
Published on

ರಾಜ್ಯ, ಜಿಲ್ಲಾ ಹೆದ್ದಾರಿ ಹಾಗೂ ಬೀದರ್‌ ಜಿಲ್ಲೆಯ ಅಂತರ ಗ್ರಾಮ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಪ್ಪಿಸಲು ಹೆಚ್ಚುವರಿ ಸೂಚನಾ ಫಲಕ ಅಳವಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಿಲೇವಾರಿ ಮಾಡಿತು.

ಬೀದರ್‌ ಮೂಲದ ಗುರುನಾಥ್‌ ವಡ್ಡೆ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಮತ್ತು ಅರ್ಜಿಯಲ್ಲಿನ ಅಂಶಗಳನ್ನು ಅವಲೋಕಿಸಿದ ಬಳಿಕ ಪೀಠವು “ಈ ವಿಚಾರದಲ್ಲಿ ಅರ್ಜಿದಾರರು ಕೋರಿರುವ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ. ಆದರೆ, ಅರ್ಜಿದಾರರು 2024ರ ಅಕ್ಟೋಬರ್‌ನಲ್ಲೇ ಮನವಿ ಸಲ್ಲಿಸಿದ್ದು, ಅದು ಗಂಭೀರ ವಿಚಾರವನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ಅವರ ಮನವಿಯನ್ನು ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಪರಿಗಣಿಸದಿರುವುದರಿಂದ ಇದೀಗ ಸರ್ಕಾರ ಅರ್ಜಿದಾರರ ಮನವಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿತು.

ಅರ್ಜಿದಾರರ ಪರ ವಕೀಲರು “ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿ ಹೆಚ್ಚಿಗೆ ಅಪಘಾತಗಳು ಸಂಭವಿಸುತ್ತಿದ್ದು, ಅಮಾಯಕರು ಸಾವನ್ನಪ್ಪುತ್ತಿದ್ದಾರೆ ಮತ್ತು ಗಾಯಗೊಳ್ಳುತ್ತಿದ್ದಾರೆ. ಹೀಗಾಗಿ, ವಾಹನ ಸವಾರರಿಗೆ ಅನುಕೂಲವಾಗುವಂತೆ ಹೆಚ್ಚಿನ ಸೂಚನಾ ಫಲಕ ಅಳವಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಈ ಸಂಬಂಧ 2024ರ ಅಕ್ಟೋಬರ್‌ನಲ್ಲಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಅದಕ್ಕೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಹೀಗಾಗಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಮನವಿ ಪರಿಗಣಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಕೋರಿದರು.

Kannada Bar & Bench
kannada.barandbench.com