ಸರ್ಕಾರಿ ಅಧಿಕಾರಿಗಳ ಸುಲಿಗೆ ಪ್ರಕರಣ: ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ಬಂಧಿಸದಂತೆ ಹೈಕೋರ್ಟ್‌ ನಿರ್ದೇಶನ

ಸದ್ಯ ಪ್ರಕರಣದಲ್ಲಿ ಜೋಶಿ ಅವರನ್ನು ಆರೋಪಿಯನ್ನಾಗಿಸಲಾಗಿದೆ. ಆ.29ರಂದು ವಿಚಾರಣೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಲೋಕಾಯುಕ್ತ ಪೊಲೀಸರು ಶ್ರೀನಾಥ್‌ ಜೋಶಿಯನ್ನು ಬಂಧಿಸುವಂಥ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ನಿರ್ದೇಶಿಸಿದ ಹೈಕೋರ್ಟ್‌.
ಸರ್ಕಾರಿ ಅಧಿಕಾರಿಗಳ ಸುಲಿಗೆ ಪ್ರಕರಣ: ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ಬಂಧಿಸದಂತೆ ಹೈಕೋರ್ಟ್‌ ನಿರ್ದೇಶನ
Published on

ಸರ್ಕಾರಿ ಅಧಿಕಾರಿಗಳಿಗೆ ದಾಳಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಲೋಕಾಯುಕ್ತದಲ್ಲಿ ಈ ಹಿಂದೆ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ಅವರನ್ನು ಬಂಧಿಸುವಂಥ ಆತುರದ ಕ್ರಮಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ.

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶ್ರೀನಾಥ್‌ ಜೋಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Mohammad Nawaz
Justice Mohammad Nawaz

“ಎಫ್‌ಐಆರ್‌ನಲ್ಲಿ ಶ್ರೀನಾಥ್‌ ಜೋಶಿ ಅವರನ್ನು ಆರೋಪಿಯನ್ನಾಗಿ ಮಾಡಲಾಗಿಲ್ಲ. ಅದಾಗ್ಯೂ, ಜೋಶಿ ಅವರು ಬಂಧನ ಭೀತಿಗೆ ಎದುರಿಸುತ್ತಿದ್ದಾರೆ. ಬಿಎನ್‌ಎಸ್‌ಎಸ್‌ ಸೆಕ್ಷನ್‌ 35(3) ಅಡಿ ನೋಟಿಸ್‌ ಜಾರಿಗೊಳಿಸಲಾಗಿದ್ದು, ಅದರ ಭಾಗವಾಗಿ ಜೋಶಿ ಅವರು ಜುಲೈ 15ರಂದು ತನಿಖೆಗೆ ಹಾಜರಾಗಿದ್ದರು. ಆದರೆ, ಅವರನ್ನು ಬಂಧಿಸಲಾಗಿಲ್ಲ. ಸದ್ಯ ಪ್ರಕರಣದಲ್ಲಿ ಜೋಶಿ ಅವರನ್ನು ಆರೋಪಿಯನ್ನಾಗಿಸಲಾಗಿದೆ. ಆಗಸ್ಟ್‌ 29ರಂದು ವಿಚಾರಣೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಲೋಕಾಯುಕ್ತ ಪೊಲೀಸರು ಶ್ರೀನಾಥ್‌ ಜೋಶಿಯನ್ನು ಬಂಧಿಸುವಂಥ ಆತುರದ ನಿರ್ಧಾರ ಕೈಗೊಳ್ಳಬಾರದು” ಎಂದು ಆದೇಶಿಸಿತು.

ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್‌ ಅರಬಟ್ಟಿ ಅವರು “ಜುಲೈ 15ರಂದು ಶ್ರೀನಾಥ್‌ ಜೋಶಿ ಅವರು ವಿಚಾರಣೆಗೆ ಹಾಜರಾಗಿದ್ದರು. ಸದ್ಯಕ್ಕೆ ಜೋಶಿ ಅವರಿಗೆ ಬಂಧನದ ಭೀತಿ ಇಲ್ಲ” ಎಂದರು.

ಜೋಶಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಅತ್ಯುತ್ತಮ ಸೇವಾ ಹಿನ್ನೆಲೆ ಹೊಂದಿರುವ ಶ್ರೀನಾಥ್‌ ಜೋಶಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆರೋಪಿಯಾಗಿರುವ ನಿಂಗಪ್ಪ ಸಾವಂತ್‌ಗೂ ಜೋಶಿ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ವಿಚಾರಣಾಧೀನ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ್ದು, ಜಾಮೀನು ಮಂಜೂರು ಮಾಡಬೇಕು” ಎಂದರು.

Also Read
ಸುಲಿಗೆ ಪ್ರಕರಣ: ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಪ್ರಕರಣದ ಹಿನ್ನೆಲೆ: ಮೊದಲ ಆರೋಪಿ ನಿಂಗಪ್ಪ ಸಾವಂತ್‌ ಜೊತೆಗೂಡಿ ಲೋಕಾಯುಕ್ತ ನಗರ ವಿಭಾಗದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಶ್ರೀನಾಥ್‌ ಜೋಶಿ ಅವರು ಪಿತೂರಿ ನಡೆಸಿ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಲೋಕಾಯುಕ್ತ ಪೊಲೀಸರು ದಾಳಿ ನಡೆಸಲಿದ್ದಾರೆ ಎಂದು ಸಾವಂತ್‌ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಜೋಶಿ ಕರೆ ಮಾಡಿಸಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದರು. ಇಲ್ಲಿ ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ಹಣವನ್ನು ಬಿಟ್‌ಕಾಯಿನ್‌ನಲ್ಲಿ ತೊಡಗಿಸಿದ್ದರು ಎಂದು ಆರೋಪಿಸಲಾಗಿದೆ.

Kannada Bar & Bench
kannada.barandbench.com