ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ತೃತೀಯ ಲಿಂಗಿ ವಿದ್ಯಾರ್ಥಿಗೆ ಪ್ರವೇಶ: ಎನ್‌ಎಲ್‌ಎಸ್‌ಐಯುಗೆ ನಿರ್ದೇಶನ

“ಅರ್ಜಿದಾರರು ಮತ್ತು ಇತರೆ ತೃತೀಯ ಲಿಂಗಿಗಳ ಹಕ್ಕು ಸಂರಕ್ಷಿಸುವ ನಿಟ್ಟಿನಲ್ಲಿ ಸಕಾರತ್ಮಕ ಕ್ರಮಕೈಗೊಳ್ಳುವುದು ಪ್ರತಿವಾದಿಗಳ ಸಾಂವಿಧಾನಿಕವಾಗಿ ಹೊಣೆಗಾರಿಕೆಯಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
NLSIU
NLSIU

ಪ್ರಸಕ್ತ ವರ್ಷದಲ್ಲಿ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ತೃತೀಯ ಲಿಂಗಿ ವಿದ್ಯಾರ್ಥಿಯು ಅರ್ಹವಾಗಿದ್ದಲ್ಲಿ ಪ್ರವೇಶಾತಿ ಕಲ್ಪಿಸುವಂತೆ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್‌ಎಲ್‌ಎಸ್‌ಐಯು) ಮಂಗಳವಾರ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ.

ತಮಗೆ ಕಾನೂನು ಪದವಿ ಪ್ರವೇಶಾತಿ ನಿರಾಕರಿಸಿರುವ ಎನ್‌ಎಲ್‌ಎಸ್‌ಯು ಕ್ರಮ ಪ್ರಶ್ನಿಸಿ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿ ಮುಗಿಲ್ ಅನ್ಬು ವಸಂತ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರ ಪ್ರವೇಶಾತಿಯು ಅರ್ಜಿಯ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಅರ್ಜಿದಾರರು ಮತ್ತು ಇತರೆ ತೃತೀಯ ಲಿಂಗಿಗಳ ಹಕ್ಕು ಸಂರಕ್ಷಿಸುವ ನಿಟ್ಟಿನಲ್ಲಿ ಸಕಾರತ್ಮಕ ಕ್ರಮಕೈಗೊಳ್ಳುವುದು ಪ್ರತಿವಾದಿಗಳ ಸಾಂವಿಧಾನಿಕವಾಗಿ ಹೊಣೆಗಾರಿಕೆಯಾಗಿದೆ. ಈ ವಿಚಾರದಲ್ಲಿ ಪ್ರತಿವಾದಿಗಳು ತಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನ ಮೂರು ವರ್ಷದ ಕಾನೂನು ಪದವಿ (ಎಲ್‌ಎಲ್‌ಬಿ) ಪ್ರವೇಶಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (ತೃತೀಯ ಲಿಂಗಿಗಳಿಗೆ) ಮೀಸಲಾತಿ ಕಲ್ಪಿಸದಿರಲು ತನ್ನ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದು ಎನ್‌ಎಲ್‌ಎಸ್‌ಐಯು ಆಕ್ಷೇಪಿಸಿತ್ತು.

ಕರ್ನಾಟಕ ರಾಜ್ಯ ತೃತೀಯ ಲಿಂಗಿಗಳ ನೀತಿ 2017 ಅನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಆ ಮೂಲಕ ಅರ್ಜಿದಾರರು ಸೇರಿದಂತೆ ತೃತೀಯ ಲಿಂಗಿಗಳಿಗೆ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಕಲ್ಪಿಸಬೇಕು. ಅರ್ಜಿದಾರರಿಗೆ ಪ್ರವೇಶಾತಿ ನಿರಾಕರಿಸಿದ್ದ‌ ಎನ್‌ಎಲ್‌ಎಸ್‌ಐಯು ನಿರ್ಧಾರವನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com