
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ದಾಬಸ್‌ಪೇಟೆ ಸಮೀಪದ ಹಳೇ ನಿಜಗಲ್ ಬಳಿ ಈಚೆಗೆ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಅದೇ ರೀತಿ, ಹೆಗಡೆ ಅವರು ತನಿಖೆಗೆ ಸಹಕರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಬಿಜೆಪಿ ಮುಖಂಡ, ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ದಾಬಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ನಡೆಸಿತು.
“ಅರ್ಜಿದಾರರ ವಿರುದ್ದ ಬಲವಂತದ ಕ್ರಮಕೈಗೊಳ್ಳಬಾರದು. ಆದರೆ, ಹೆಗಡೆ ಅವರು ತನಿಖೆಗೆ ಸಹಕರಿಸಬೇಕು” ಎಂದು ನ್ಯಾಯಾಲಯ ಆದೇಶಿಸಿತು. ಅರ್ಜಿದಾರ ಹೆಗಡೆ ಪರವಾಗಿ ವಾದಿಸಿದ ವಕೀಲ ಕೆ ಪವನ್‌ಚಂದ್ರ ಶೆಟ್ಟಿ ವಾದಿಸಿದರು.
ಪ್ರಕರಣದ ಹಿನ್ನೆಲೆ: ತುಮಕೂರಿನಲ್ಲಿ ಮದುಗೆ ಹೋಗಿ, ಏಳು ಮಂದಿ ಇನ್ನೋವಾ ಕಾರಿನಲ್ಲಿ ಹಳೇ ನಿಜಗಲ್ ಬಳಿ ಬರುತಿದ್ದಾಗ ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಕಾರಿನ ಚಾಲಕ ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದರು. ಇದರಿಂದ ಕಾರಿನಲ್ಲಿದ್ದ ಸಲ್ಮಾನ್ ಖಾನ್ ಅವರ ಮೂರು ಹಲ್ಲುಗಳು ಮುರಿದಿವೆ ಎಂದು ಗಾಯಾಳು, ಹಾಲೇನಹಳ್ಳಿಯ ಸೈಫ್ ಖಾನ್ ದೂರು ನೀಡಿದ್ದರು.
ಅನಂತ್ ಕುಮಾರ್ ಹೆಗಡೆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್ ಕುಮಾರ್ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ಅವರು ದೂರು ನೀಡಿದ್ದರು. ಇದನ್ನು ಆಧರಿಸಿ ದಾಬಸ್ ಠಾಣೆಯ ಪೊಲೀಸರು ಅನಂತ್ ಕುಮಾರ್ ಹೆಗಡೆ, ಭದ್ರತಾ ಸಿಬ್ಬಂದಿ ಶ್ರೀಧರ್ ಹಾಗೂ ಕಾರು ಚಾಲಕ ಮಹೇಶ್ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 117, 126, 74, 351(4) ಪ್ರಕರಣ ದಾಖಲಿಸಿದ್ದಾರೆ.
ಬಂಧಿತರಾಗಿದ್ದ ಶ್ರೀಧರ್ ಮತ್ತು ಮಹೇಶ್‌ಗೆ ನೆಲಮಂಗಲ ವಿಚಾರಣಾಧೀನ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿತ್ತು.