ಅತ್ಯಾಚಾರ ಪ್ರಕರಣ: ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಲು ಪ್ರಜ್ವಲ್‌ಗೆ ಹೈಕೋರ್ಟ್‌ ನಿರ್ದೇಶನ

ಪ್ರಜ್ವಲ್‌ ಜಾಮೀನು ಕೋರಿದ ಹತ್ತು ದಿನಗಳಲ್ಲಿ ಅದನ್ನು ನಿರ್ಧರಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿರುವ ಹೈಕೋರ್ಟ್‌.
Prajwal Revanna & Karnataka HC
Prajwal Revanna & Karnataka HC
Published on: 

ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಮೊದಲಿಗೆ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಬೇಕು. ಪ್ರಜ್ವಲ್‌ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು 10 ದಿನಗಳಲ್ಲಿ ನಿರ್ಧರಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಎರಡನೇ ಬಾರಿಗೆ ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕಳೆದ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಆರೋಪಿಯು ಮೊದಲಿಗೆ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಬೇಕು. ಅಲ್ಲಿನ ಅರ್ಜಿ ವಜಾಗೊಂಡ ಬಳಿಕ ಹೈಕೋರ್ಟ್‌ಗೆ ಬರಬಹುದು. ಆದರೆ, ಹಾಲಿ ಪ್ರಕರಣದಲ್ಲಿ ನೇರವಾಗಿ ಹೈಕೋರ್ಟ್‌ಗೆ ಬಂದಿರುವುದರಿಂದ ಅವರ ಅರ್ಜಿ ಪುರಸ್ಕರಿಸಬಾರದು” ಎಂದಿದ್ದರು.

Also Read
[ಅತ್ಯಾಚಾರ ಪ್ರಕರಣ] ಸಂತ್ರಸ್ತರಿಗೆ ಬೆದರಿಕೆ, ವಿಚಾರಣೆ ವಿಳಂಬಕ್ಕೆ ಪ್ರಜ್ವಲ್‌ ಕುಟುಂಬ ಕಾರಣ: ಎಸ್‌ಐಟಿ ವಾದ

ಇದೇ ವಿಚಾರ ಪ್ರಸ್ತಾಪಿಸಿದ ನ್ಯಾಯಾಲಯವು “ಮೊದಲಿಗೆ ಪ್ರಜ್ವಲ್‌ ಅವರು ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಬೇಕು. ಅಲ್ಲಿನ ಅರ್ಜಿ ಪುರಸ್ಕಾರವಾಗದಿದ್ದರೆ ಹೈಕೋರ್ಟ್‌ ಕದತಟ್ಟಲು ಅವಕಾಶ ಇದ್ದೇ ಇದೆ. ಪ್ರಜ್ವಲ್‌ ಸಲ್ಲಿಸುವ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು 10 ದಿನಗಳಲ್ಲಿ ನಿರ್ಧರಿಸಬೇಕು” ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ಪ್ರಜ್ವಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರದೆಯೇ ಹೈಕೋರ್ಟ್‌ಗೆ ಬರಬಹುದಾಗಿದೆ” ಎಂದು ವಾದಿಸಿದರು. ಇದನ್ನು ಒಪ್ಪದ ನ್ಯಾಯಾಲಯವು ವಿಚಾರಣಾ ನ್ಯಾಯಾಲಯದಲ್ಲಿ ಮೊದಲಿಗೆ ಅವಕಾಶ ಬಳಕೆ ಮಾಡುವಂತೆ ಸೂಚಿಸಿತು. ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಹಾಜರಿದ್ದರು.