ಸಹಕಾರ ಸಂಘಗಳಿಂದ ನಿಯಮ ಪಾಲನೆ ತಿಳಿಯಲು ಕಾಮನ್‌ ಪೋರ್ಟಲ್‌ ರೂಪಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಹೈಕೋರ್ಟ್‌ ಆದೇಶ ಪಾಲನೆ ಕುರಿತು ನಾಲ್ಕು ವಾರಗಳಲ್ಲಿ ರಾಜ್ಯ ಸರ್ಕಾರ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
Karnataka HC and Justice Suraj Govindaraj
Karnataka HC and Justice Suraj Govindaraj
Published on

ರಾಜ್ಯ ಸಹಕಾರ ಕಾಯಿದೆ ಮತ್ತು ಅದರಡಿ ರಚನೆಯಾಗಿರುವ ಸಂಘಗಳು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿವೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಲು ಎಲ್ಲ ಸಹಕಾರಿ ಸಂಘಗಳನ್ನು ಒಳಗೊಳ್ಳುವ ಕಾಮನ್‌ ಪೋರ್ಟಲ್‌ ಒಂದನ್ನು (ಸಾಮಾನ್ಯ ಅಂತರ್ಜಾಲತಾಣ) ರೂಪಿಸುವಂತೆ ರಾಜ್ಯ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಬೆಂಗಳೂರಿನ ನಾಗರಬಾವಿಯ ಎಂ ಆರ್‌ ರುಕ್ಮಾಂಗದ ವಿಶ್ವಪ್ರಜ್ಞ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಹೈಕೋರ್ಟ್‌ ಆದೇಶ ಪಾಲನೆ ಕುರಿತು ನಾಲ್ಕು ವಾರಗಳಲ್ಲಿ ರಾಜ್ಯ ಸರ್ಕಾರ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ಸಹಕಾರ ಸಂಘಗಳು ಸಹಕಾರ ಕಾಯಿದೆ ಮತ್ತು ಅದರಡಿ ರಚಿಸಿರುವ ನಿಯಮಗಳನ್ನು ಪಾಲನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಮತ್ತು ಇ-ಆಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಒಗ್ಗೂಡಿ ಕಾಮನ್‌ ಪೋರ್ಟಲ್‌ ಅನ್ನು ರೂಪಿಸಲು ಇದು ಸಕಾಲ” ಎಂದು ಹೇಳಿದೆ.

“ಆ ಪೋರ್ಟಲ್‌ನಲ್ಲಿ ಎಲ್ಲ ಸಹಕಾರಿ ಸಂಘಗಳ ದತ್ತಾಂಶವನ್ನು ಅಪ್‌ಲೋಡ್‌ ಮಾಡಬೇಕು. ಯಾವ ಯಾವ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎನ್ನುವ ವಿವರಗಳು ಒಳಗೊಂಡಿರಬೇಕು. ಸಹಕಾರ ಸಂಘಗಳ ಕಾಯಿದೆ ಮತ್ತು ನಿಯಮಗಳಡಿ ಎಲ್ಲಾ ಅಗತ್ಯ ಮಾಹಿತಿಗಳನ್ನು ಅದು ಒಳಗೊಂಡಿರಬೇಕು. ಆ ಪೋರ್ಟಲ್‌ ಬಳಕೆ ಮಾಡುವ ಅಧಿಕಾರ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ ಅವರಿಗೆ ಇರಬೇಕು, ಅವರು ಎಲ್ಲಾ ಸಂಘಗಳ ಮೇಲೆ ನಿಗಾ ಇಡಲು ಇದು ಸಹಕಾರಿಯಾಗಲಿದೆ” ಎಂದು ಪೀಠ ಆದೇಶಿಸಿದೆ.

“ಸಹಕಾರ ಸಂಘಗಳು ಯಾವುದಾದರೂ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಅಂತಹ ಸಂಘಗಳಿಗೆ ಸ್ವಯಂಚಾಲಿತ ರಿಮೈಂಡರ್‌ಗಳನ್ನು ಕಳುಹಿಸಲು ಪೋರ್ಟಲ್‌ ಸಹಕಾರಿಯಾಗಲಿದೆ” ಎಂದು ಹೇಳಿರುವ ನ್ಯಾಯಾಲಯವು “ಎಲ್ಲಾ ರೀತಿಯಲ್ಲೂ ಪೋರ್ಟಲ್‌ ಸಹಕಾರ ಸಂಘಗಳಿಗೆ ಸಾಕಷ್ಟು ಅನುಕೂಲ ಮಾಡಲಿದೆ. ಒಂದು ವೇಳೆ ಸಹಕಾರ ಸಂಘಗಳು ನಿಯಮಗಳ ಅನುಸಾರ ನಡೆಯದಿದ್ದರೆ ಅಂತಹ ಸಂಘಗಳ ವಿರುದ್ಧ ತಕ್ಷಣ ಕ್ರಮಗಳನ್ನು ಜರುಗಿಸಲೂ ಸಹ ಸಾಧ್ಯವಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.

Also Read
ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಅಡಿ ಕರಡು ನಿಯಮ ರೂಪಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ

“ಹಾಲಿ ಸಹಕಾರ ಸಂಘಗಳ ಕಾಯಿದೆ ನಿಯಮ 13ಡಿ ಪ್ರಕಾರ ಸಹಕಾರ ಸಂಘಗಳಿಗೆ ಅಂಚೆ ಮೂಲಕ ನೋಟಿಸ್‌ ಕಳುಹಿಸುವುದು ಕಷ್ಟಕರ, ಎಷ್ಟೋ ಬಾರಿ ನೋಟಿಸ್‌ ಕಳಹಿಸಲಾಗದು ಅಥವಾ ತಡವಾಗಿ ತಲುಪುತ್ತದೆ ಮತ್ತು ಅದರಿಂದ ಸಹಕಾರ ಸಂಘಗಳಿಗೆ ಆರ್ಥಿಕ ಹೊರೆ ತಗುಲಿ ಸಂಕಷ್ಟಕ್ಕೆ ಒಳಗಾಗುತ್ತವೆ. ಆದರೆ ಪೋರ್ಟಲ್‌ ಮೂಲಕ ಸಂಘಗಳು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಮೇಲ್‌, ಎಸ್‌ಎಂಎಸ್‌, ವಾಟ್ಸಪ್‌ ಮೂಲಕವೂ ನೋಟಿಸ್‌ಗಳನ್ನು ಕಳುಹಿಸುವುದು ಅತ್ಯಂತ ಸುಲಭ ವಿಧಾನವಾಗಿದೆ” ಎಂದು ಪೀಠ ತಿಳಿಸಿದೆ.

ಪ್ರಸಕ್ತ ಪ್ರಕರಣದಲ್ಲಿ ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯವು ಅರ್ಜಿದಾರರನ್ನು ಅನರ್ಹ ಮತದಾರರು ಎಂದು ಪ್ರಕಟಿಸಿದ್ದ ಪ್ರತಿವಾದಿ ಸಂಘದ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ, ಅರ್ಜಿದಾರರು ಈಗಾಗಲೇ ಮತದಾನ ಮಾಡಿರುವುದರಿಂದ ಪ್ರತಿವಾದಿಗಳು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಆದೇಶ ನೀಡಿದೆ.

Kannada Bar & Bench
kannada.barandbench.com