ಮರಳು ಗಣಿಗಾರಿಕೆ ಪತ್ತೆಗೆ ಉಪಗ್ರಹ ಆಧಾರಿತ ವ್ಯವಸ್ಥೆ ರೂಪಿಸಲು ಹೈಕೋರ್ಟ್‌ ನಿರ್ದೇಶನ; ಇಸ್ರೋ ನೆರವು ಪಡೆಯಲು ಸಲಹೆ

ಅನಧಿಕೃತ ಮತ್ತು ವಿವೇಚನಾರಹಿತ ಮರಳು ಗಣಿಗಾರಿಕೆಯು ನದಿಗಳ ಬತ್ತುವಿಕೆಗೆ ಕಾರಣವಾಗಿದೆ. ಇನ್ನು ಕೆಲ ಪ್ರಕರಣಗಳಲ್ಲಿ ನದಿಯ ಸಾವಿಗೂ ಕಾರಣವಾಗಿದೆ. ಇದರಿಂದಾಗಿ ಮನುಷ್ಯನ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಸಮಸ್ಯೆಯಾಗಿದೆ ಎಂದ ನ್ಯಾಯಾಲಯ.
Justice Suraj Govindraj
Justice Suraj Govindraj
Published on

ನದಿ ತಟದಲ್ಲಿನ ಅಕ್ರಮ ಗಣಿಗಾರಿಕೆಯ ಬಗ್ಗೆ ಈಚೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ನದಿ ಪಾತ್ರದಲ್ಲಿನ ಬದಲಾವಣೆಗಳ ಬಗ್ಗೆ ನೈಜ ಸಮಯದಲ್ಲಿ ಮಾಹಿತಿ ನೀಡುವ ಉಪಗ್ರಹ ಆಧಾರಿತ ವ್ಯವಸ್ಥೆಯೊಂದನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಇದಕ್ಕೆ ಭಾರತೀಯ ಬಾಹ್ಯಕಾಶ ಸಂಶೋಧನಾ ಕೇಂದ್ರದ (ಇಸ್ರೋ) ನೆರವು ಪಡೆಯುವಂತೆ ಸಲಹೆ ನೀಡಿದೆ.

ಅನುಮತಿಯಲ್ಲದೆ 2,904 ಮೆಟ್ರಿಕ್ ಟನ್ ಮರಳನ್ನು ದಾಸ್ತಾನು ಇರಿಸಿಕೊಳ್ಳಲಾಗಿದೆ ಎಂದು ಜಮಖಂಡಿ ತಹಸೀಲ್ದಾರ್ ನೀಡಿದ್ದ ನೋಟಿಸ್ ಪ್ರಶ್ನಿಸಿ ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಭಗವಂತ ಅಲಗೂರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ನದಿಗಳ ಗಡಿ, ಮರಳಿನ ದಿಬ್ಬಗಳನ್ನು ಉಪಗ್ರಹ ಚಿತ್ರಗಳ ಮೂಲಕ ಗುರುತಿಸಬೇಕು ಮತ್ತು ಇದರಲ್ಲಿ ಏನೇ ಬದಲಾವಣೆ ಆದರೂ ಅದರ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗಳಿಗೆ ತಿಳಿಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.  

“ನದಿ ಗಣಿಗಾರಿಕೆಯ ಮೇಲೆ ಸೂಕ್ತ ನಿಗಾ ಇಲ್ಲದಿರುವುದು ಮತ್ತು ನಿಗಾ ಇಡುವ ವ್ಯವಸ್ಥೆ ಇಲ್ಲದಿರುವುದು ಈ ಪ್ರಕರಣದಿಂದ ಗೊತ್ತಾಗಿದೆ. ಆದ್ದರಿಂದ, ಲಭ್ಯ ಇರುವ ತಂತ್ರಜ್ಞಾನವನ್ನು ಬಳಸಿ ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಇದು ಸಕಾಲ. ರಾಜ್ಯ ಸರ್ಕಾರವು ಗಣಿ ಇಲಾಖೆಯ ಮೂಲಕ ಕಂದಾಯ ಮತ್ತು ಅರಣ್ಯ ಇಲಾಖೆ ಮುಂತಾದವುಗಳ ನೆರವಿನಿಂದ ಉಪಗ್ರಹ ಆಧಾರಿತ ಚಿತ್ರಗಳ ವ್ಯವಸ್ಥೆಯನ್ನು ಬಳಸಿಕೊಂಡು ಇಂತಹ ಸಮಸ್ಯೆಗಳನ್ನು ನಿರ್ವಹಿಸಬೇಕು” ಎಂದು ನಿರ್ದೇಶನ ನೀಡಿದೆ.

“ಅನಧಿಕೃತ ಮತ್ತು ವಿವೇಚನಾರಹಿತ ಮರಳು ಗಣಿಗಾರಿಕೆಯು ನದಿಗಳ ಬತ್ತುವಿಕೆಗೆ ಕಾರಣವಾಗಿದೆ. ಇನ್ನು ಕೆಲ ಪ್ರಕರಣಗಳಲ್ಲಿ ನದಿಯ ಸಾವಿಗೂ ಕಾರಣವಾಗಿದೆ. ಇದರಿಂದಾಗಿ ಮನುಷ್ಯನ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗೆ ಹಾನಿಯಾಗುತ್ತಿದ್ದು, ಭವಿಷ್ಯದಲ್ಲಿ ಗಂಭೀರ ದುಷ್ಪರಿಣಾಮ ಸ್ಥಷ್ಟಿಸುವ ಸಾಧ್ಯತೆಯಿದೆ. ಆದ್ದರಿಂದ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಗಣಿ ಇಲಾಖೆಯ ನಿರ್ದೇಶಕ, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ಮತ್ತು ಇ - ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಅಗತ್ಯ ನೆರವು ಪಡೆದು ನದಿ ಪಾತ್ರ, ಮರಳಿನ ದಿಬ್ಬಗಳಲ್ಲಿ ಕಂಡು ಬರುವ ಯಾವುದೇ ಬದಲಾವಣೆಯನ್ನು ನೈಜ ಸಮಯದಲ್ಲಿ ಪತ್ತೆ ಹಚ್ಚಿ ಮಾಹಿತಿ ನೀಡುವ ವ್ಯವಸ್ಥೆಯನ್ನು ರೂಪಿಸಬೇಕು. ಈ ಬಗ್ಗೆ ಆರು ವಾರದೊಳಗೆ ವರದಿ ಸಲ್ಲಿಸಬೇಕು. ನಿರ್ದೇಶನಗಳ ಪಾಲನೆಯ ಬಗೆಗಿನ ಕುರಿತಾದ ವಿಚಾರಣೆಯನ್ನು ಏಪ್ರಿಲ್‌ 3ಕ್ಕೆ ನಡೆಸಲಾಗುವುದು” ಎಂದು ನ್ಯಾಯಾಲಯ ಆದೇಶಿಸಿದೆ.

ಹಾಲಿ ಪ್ರಕರಣದಲ್ಲಿ ಅರ್ಜಿದಾರರಿಗೆ ತಹಸೀಲ್ದಾರ್ 2022ರ ಮೇ 5ರಂದು ನೀಡಿದ್ದ ನೋಟಿಸ್ ಅನ್ನು ನ್ಯಾಯಾಲಯ ರದ್ದುಪಡಿಸಿದೆ. ಕೃಷ್ಣಾ ನದಿ ಕೊಳ್ಳದಲ್ಲಿ ಗಣಿಗಾರಿಕೆ ಮಾಡಿದ್ದ ಮರಳನ್ನು ವ್ಯಾಪಾರ ಮಾಡಲಾಗುತ್ತಿತ್ತು ಎಂದು ತಹಸೀಲ್ದಾರ್ ಅವರು ಅರ್ಜಿದಾರರಿಗೆ ನೋಟಿಸ್ ನೀಡಿದ್ದರು. ಆದರೆ, ಈ ನೋಟಿಸ್ ಅನ್ನು ಅರ್ಜಿದಾರರು ಸ್ವೀಕರಿಸಿರುವುದಕ್ಕೆ ಯಾವುದೇ ಸ್ವೀಕೃತಿ ಪಡೆದಿರಲಿಲ್ಲ ಎಂಬುದನ್ನು ಪರಿಗಣಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಹೊಸದಾಗಿ ಅರ್ಜಿದಾರರಿಗೆ ಅವರ ವಕೀಲರ ಮೂಲಕ ನೋಟಿಸ್ ಹಸ್ತಾಂತರ ಮಾಡಲಾಗಿದ್ದು ಮಾರ್ಚ್ 7ರೊಳಗೆ ಈ ಬಗ್ಗೆ ತಹಸೀಲ್ದಾರ್ ಅವರಿಗೆ ಪೂರಕ ದಾಖಲೆಯೊಂದಿಗೆ ಉತ್ತರಿಸಬೇಕು.  ಈ ಪ್ರತಿಕ್ರಿಯೆಯನ್ನು ಪರಿಗಣಿಸಿ ತಹಸೀಲ್ದಾರ್ ಕಾನೂನು ಪ್ರಕಾರ ಅಗತ್ಯ ಆದೇಶ ಹೊರಡಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Attachment
PDF
Bhagavant Alagur Vs State of Karnataka
Preview
Kannada Bar & Bench
kannada.barandbench.com