ಮುಖ್ಯ ಕಾರ್ಯದರ್ಶಿ ಅವಹೇಳನ ಪ್ರಕರಣ: ರವಿಕುಮಾರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

ರವಿಕುಮಾರ್‌ ಅವರಿಗೆ ಇಂಥ ಹೇಳಿಕೆ ನೀಡುವ ಚಾಳಿಯಿದೆ. ಈ ಹಿಂದೆ ಕಲಬುರ್ಗಿಯ ಡಿ ಸಿಯನ್ನು ಪಾಕಿಸ್ತಾನಿ ಎಂದು ನಿಂದಿಸಿದ್ದರು. ಇನ್ನೊಬ್ಬ (ಸಿ ಟಿ) ರವಿ ಸದನದಲ್ಲೇ ಸಚಿವೆಯ ಬಗ್ಗೆ ಆಕ್ಷೇಪಾರ್ಹ ಮಾತು ಆಡಿದ್ದರು ಎಂದ ಎಸ್‌ಪಿಪಿ ಬೆಳ್ಳಿಯಪ್ಪ.
ಮುಖ್ಯ ಕಾರ್ಯದರ್ಶಿ ಅವಹೇಳನ ಪ್ರಕರಣ: ರವಿಕುಮಾರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ
Published on

“ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ರಾತ್ರಿ ಸರ್ಕಾರಕ್ಕೆ, ಹಗಲಿನ ವೇಳೆ ಸಿ ಎಂಗೆ ಕೆಲಸ ಮಾಡುತ್ತಾರೆ” ಎಂಬ ಆಕ್ಷೇಪಾರ್ಹವಾದ ಹೇಳಿಕೆ ನೀಡಿದ ಆರೋಪ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಹಾಗೂ ಬಿಜೆಪಿ ಮುಖಂಡ ಎನ್‌ ರವಿಕುಮಾರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಆದರೆ, ಅವರು ತನಿಖೆಗೆ ಸಹಕರಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಅವರು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice S R Krishna Kumar
Justice S R Krishna Kumar

ವಾದ-ಪ್ರತಿವಾದ ಆಲಿಸಿ, ಟ್ಯಾಬ್‌ ಮತ್ತು ಮೊಬೈಲ್‌ನಲ್ಲಿ ರವಿಕುಮಾರ್‌ ಅವರ ಹೇಳಿಕೆಯನ್ನು ವೀಕ್ಷಿಸಿದ ಪೀಠವು ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಆದರೆ, ರವಿಕುಮಾರ್‌ ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿತು. ಅಲ್ಲದೇ, ಪ್ರತಿವಾದಿ ಸರ್ಕಾರಕ್ಕೆ ನೋಟಿಸ್‌ ಜಾರಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ರವಿಕುಮಾರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ರವಿಕುಮಾರ್‌ ಅವರು ಮುಖ್ಯ ಕಾರ್ಯದರ್ಶಿಗೆ ಮೆಚ್ಚುಗೆ ಸೂಚಿಸಿ ಮಾತನಾಡಿದ್ದಾರೆ ವಿನಾ ದೂರುದಾರರು ಅರ್ಥಮಾಡಿಕೊಂಡಿರುವ ರೀತಿಯಲ್ಲಿ ಅಲ್ಲ. ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ರವಿಕುಮಾರ್‌ ಅವರಿಗೆ ಇಂಥ ಹೇಳಿಕೆ ನೀಡುವ ಚಾಳಿಯಿದೆ. ಈ ಹಿಂದೆ ಕಲಬುರ್ಗಿಯ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಎಂದು ನಿಂದಿಸಿದ್ದರು. ಇನ್ನೊಬ್ಬ (ಸಿ ಟಿ) ರವಿ ಸದನದಲ್ಲೇ ಸಚಿವೆಯ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ಇದಕ್ಕೆ ಯಾವುದೇ ವಿಶೇಷ ವಿನಾಯಿತಿ ನೀಡದೇ ಇದೇ ನ್ಯಾಯಾಲಯ ಅವರ ಅರ್ಜಿ ವಜಾಗೊಳಿಸಿತ್ತು. ತಡ ರಾತ್ರಿಯಲ್ಲಿ ಮಹಿಳೆ ಮುಕ್ತವಾಗಿ ಓಡಾಡುವ ಸಂದರ್ಭ ನಿರ್ಮಾಣವಾದಾಗ ಮಾತ್ರ ಸ್ವಾತಂತ್ರ್ಯ ಜಾರಿಗೆ ಬಂದಂತೆ.. ಎಂದು ಹೇಳಿದ್ದ ಗಾಂಧಿ ಪ್ರತಿಮೆಯ ಕೆಳಗೆ ನಿಂತು ರಾಜ್ಯದ ಅತ್ಯುನ್ನತ ಅಧಿಕಾರಿಯ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ” ಎಂದರು.

ವಿಡಿಯೊ ಪರಿಶೀಲಿಸಿದ ಪೀಠವು “ಅಂಥದ್ದೇನು ಕಾಣುತ್ತಿಲ್ಲ. ತಡೆ ನೀಡಲಾಗುವುದು. ದೂರುದಾರೆ ಸಂತ್ರಸ್ತೆಯಲ್ಲವಲ್ಲ” ಎಂದಿತು.

ಇದರಿಂದ ಮತ್ತಷ್ಟು ಉದ್ರಿಕ್ತರಾದ ಬೆಳ್ಳಿಯಪ್ಪ ಅವರು “ಎಲ್ಲಾ ಪ್ರಕರಣಗಳಲ್ಲೂ ಈ ರೀತಿ ತಡೆ ನೀಡುತ್ತಾ ಹೋದರೆ ಪೊಲೀಸರ ಮನೋಬಲ ಏನಾಗಬೇಕು? ಯಾರು ಬೇಕಾದರೂ ಕ್ರಿಮಿನಲ್‌ ಕಾನೂನು ಜಾರಿಗೊಳಿಸಬಹುದು. ರವಿಕುಮಾರ್‌ ವಿಚಾರಣಾಧೀನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಅಲ್ಲೇ ಹೋಗಲಿ. ಪ್ರಕರಣ ದಾಖಲಾದ 24 ತಾಸಿನಲ್ಲಿ ಹೈಕೋರ್ಟ್‌ ಮುಂದೆ ಬಂದಿದ್ದಾರೆ. ಇದು ಸಂಜ್ಞೇ ಅಪರಾಧವಾಗಿದೆ. ಸುದ್ದಿ ವಾಹಿನಿಯ ಸಂಪಾದಕರು, ಸ್ಥಳದಲ್ಲಿದ್ದ ಪೊಲೀಸರು, ಮುಖ್ಯ ಕಾರ್ಯದರ್ಶಿ ಹೇಳಿಕೆಯನ್ನೂ ದಾಖಲಿಸಿ, ರವಿಕುಮಾರ್‌ ಅವರ ಹೇಳಿಕೆಯ ಉದ್ದೇಶವನ್ನು ಪತ್ತೆ ಮಾಡಲಾಗುವುದು. ಹೀಗಾಗಿ, ತಡೆ ನೀಡಬಾರದು” ಎಂದರು.

ಇದಕ್ಕೆ ಆಕ್ಷೇಪಿಸಿದ ಅರುಣ್‌ ಶ್ಯಾಮ್‌ ಅವರು “ರವಿಕುಮಾರ್‌ ಅವರ ಮನೆಯ ಮುಂದೆ ಹತ್ತು ಮಂದಿ ಪೊಲೀಸರು ಬಂಧನಕ್ಕೆ ಕಾದು ಕೂತಿದ್ದಾರೆ. ಇದು ತಡೆಯಾಜ್ಞೆ ನೀಡಬೇಕಾದ ಮತ್ತು ಅರ್ಜಿದಾರರಿಗೆ ರಕ್ಷಣೆ ನೀಡಲೇಬೇಕಾದ ಪ್ರಕರಣವಾಗಿದೆ. ಇದಕ್ಕೆ ಸಂಬಂಧಿತ ತೀರ್ಪುಗಳನ್ನು ತೋರಿಸಲಾಗುವುದು. ತಡೆ ನೀಡಿದರೆ ಪೊಲೀಸರ ಮನೋಬಲ ಕುಂದುತ್ತದೆ ಎನ್ನುವುದಾದರೆ, ಮುಖ್ಯಮಂತ್ರಿ ಅವರು ಬೆಳಗಾವಿಯಲ್ಲಿ ಎಸಿಪಿಗೆ ಕೈ ಎತ್ತಿದಾಗ ಏನು ಆಗಲಿಲ್ಲವೇ?” ಎಂದು ಕಿಚಾಯಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ರವಿಕುಮಾರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಿ, ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.

ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಅವರು ನೀಡಿದ ದೂರಿನ ಮೇರೆಗೆ ರವಿಕುಮಾರ್‌ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ಗಳಾದ 351 (3), 75 (3) ಮತ್ತು 79 ಅಡಿ ಪ್ರಕರಣ ದಾಖಲಾಗಿದೆ.

Kannada Bar & Bench
kannada.barandbench.com