

ವಿಕಲಚೇತನರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ಪ್ರತ್ಯೇಕ ಶಾಲೆ ಇತ್ಯಾದಿ ವಿಚಾರಗಳನ್ನು ಒಳಗೊಂಡಿರುವ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆರು ವಾರಗಳಲ್ಲಿ ಸಮಗ್ರವಾದ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಅಂಗವಿಕಲ ವ್ಯಕ್ತಿಗಳು ಹಕ್ಕುಗಳ ಕಾಯಿದೆಯ ನಿಬಂಧನೆಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ವೈ ಕಾರ್ತಿಕ್ ಮತ್ತು ವೈ ಕೌಶಿಕ್ ಹಾಗೂ ಬಳ್ಳಾರಿಯ ವೈ ಸತೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲ ಪ್ರದೀಪ್ ನಾಯಕ್ ಅವರು “2024ರ ಸಿಎಜಿ ವರದಿ ಪ್ರಕಾರ ವಿಕಲಚೇತನರ ಕಲ್ಯಾಣಕ್ಕೆ ನಿಗದಿಪಡಿಸಬೇಕಾದ ನಿಧಿಯನ್ನು ಹಂಚಿಕೆ ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ ಹಣ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪ್ರಸ್ತಾವ ಸಲ್ಲಿಸಿಲ್ಲ. ಸರ್ಕಾರಿ ಉದ್ಯೋಗದಲ್ಲಿ ಶೇ. 5ರಷ್ಟು ಮೀಸಲಾತಿ ಕಲ್ಪಿಸಬೇಕು. ಅದೂ ಆಗಿಲ್ಲ. ಖಾಸಗಿ ಕ್ಷೇತ್ರದಲ್ಲಿ ವಿಕಲಚೇತನರನ್ನು ನೇಮಕ ಮಾಡಿಕೊಳ್ಳುವ ಉದ್ಯೋಗದಾತರಿಗೆ ಪ್ರೋತ್ಸಾಹ ಧನ (ಇನ್‌ಸೆಂಟಿವ್) ನೀಡುತ್ತಿಲ್ಲ. ಕೃಷಿ ಭೂಮಿ, ಮನೆ ಹಂಚಿಕೆ ಮಾಡಬೇಕು. ಅದನ್ನೂ ಮಾಡಲಾಗುತ್ತಿಲ್ಲ. ಕಾಯಿದೆಯ ಸೆಕ್ಷನ್ 34 ಮೀಸಲಾತಿಗೆ ಸಂಬಂಧಿಸಿದ್ದಾಗಿದೆ. ಸೆಕ್ಷನ್ 35ರಲ್ಲಿ ಅಂಗವಿಕಲಿಗೆ ಉದ್ಯೋಗ ಕಲ್ಪಿಸುವ ಉದ್ಯೋಗದಾತರಿಗೆ ಪ್ರೋತ್ಸಾಹ ಧನ, ಸೆಕ್ಷನ್ 37 ವಿಶೇಷ ಯೋಜನೆಗೆ ಸಂಬಂಧಿಸಿವೆ” ಎಂದರು.
ಇದನ್ನು ಆಲಿಸಿದ ಪೀಠವು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರ ಸಬಲೀಕರಣ ಇಲಾಖೆ ಹಾಗೂ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಕಾಯಿದೆಯ ಸೆಕ್ಷನ್ 17, 24, 34, 35, 37 ಮತ್ತು 88 ಜಾರಿಗೆ ಸಂಬಂಧಿಸಿದಂತೆ ಸಮಗ್ರವಾದ ಸ್ಥಿತಿಗತಿ ವರದಿಯನ್ನು ಆರು ವಾರಗಳಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು.
ವಿಕಲಚೇತನರಿಗೆ ಹೆಚ್ಚುವರಿಯಾಗಿ ಶಾಲೆ ಮತ್ತು ಸಂಸ್ಥೆಗಳನ್ನು ತೆರೆಯಬೇಕು. ಎಲ್ಲಾ ಶಾಲೆಗಳಲ್ಲಿ ವಿಕಲಚೇತನರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಬೇಕು. ವಿಕಲಚೇತನರಿಗಾಗಿ ವಿಶೇಷ ತರಬೇತಿ ಕೇಂದ್ರ ಆರಂಭಿಸಬೇಕು. ಸರ್ಕಾರಿ ಉದ್ಯೋಗದಲ್ಲಿ ವಿಕಲಚೇತನರಿಗೆ ಶೇ.4 ಮೀಸಲಾತಿ ನೀಡಬೇಕು.
ಸರ್ಕಾರದ ಪ್ರತಿ ಇಲಾಖೆಯಲ್ಲೂ ವಿಕಲಚೇತನರ ಕಲ್ಯಾಣಕ್ಕೆ ಶೇ. 5ರಷ್ಟು ಬಜೆಟ್ ಮೀಸಲಿಡಬೇಕು. ವಿಶೇಷ ಅಂಗವಿಕಲತೆ ಗುರುತಿನ ಚೀಟಿ (ಯುಡಿಡಿ) ನೀಡಬೇಕು. ಅನರ್ಹರಿಗೆ ನೀಡಿರುವ ಯುಡಿಡಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.