ರಾಜಕಾಲುವೆ ಒತ್ತುವರಿ ತೆರವಿಗೆ ಕಾರ್ಯ ಯೋಜನೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮದ ವರದಿ ಸಲ್ಲಿಸಲು ನಿರ್ದೇಶನ

ಕೆರೆ ಸಂರಕ್ಷಣೆ & ಅಭಿವೃದ್ಧಿ ಕಾಯಿದೆ ಅಥವಾ ಬಿಬಿಎಂಪಿ ಕಾಯಿದೆ ಅಡಿ ಎಲ್ಲೆಲ್ಲಿ ಅಗತ್ಯವಿದೆ ಮತ್ತು ಎಲ್ಲೆಲ್ಲಿ ಡಿಸಿಗ್ನೇಟೆಡ್‌ ಆಫೀಸರ್ ನೇಮಕವಾಗಿಲ್ಲ ಅಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಸರ್ಕಾರವು ಕ್ರಮಕೈಗೊಳ್ಳಬೇಕು ಎಂದಿರುವ ಪೀಠ.
Chief Justice P B Varale and Justice M G S Kamal
Chief Justice P B Varale and Justice M G S Kamal

ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕಾರ್ಯ ಯೋಜನೆ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿರುವ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಬಿಬಿಎಂಪಿ, ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಬೆಂಗಳೂರಿನ ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಿಟಿಜನ್ ಆಕ್ಷನ್ ಗ್ರೂಪ್ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಇಎಂಪಿಆರ್‌ಐ, ನೀರಿ, ಲಕ್ಷ್ಮಣ ರಾವ್‌ ಸಮಿತಿ ಮತ್ತು ನ್ಯಾಯಮೂರ್ತಿ ಎನ್‌ ಕೆ ಪಾಟೀಲ್‌ ಸಮಿತಿಯ ವರದಿಗಳು ಸೇರಿದಂತೆ ಸಾಕಷ್ಟು ದಾಖಲೆಗಳು ಇವೆ. ಈಗ ಕಾರ್ಯ ಯೋಜನೆ ರೂಪಿಸುವುದಷ್ಟೇ ಬಾಕಿ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. “ಪ್ರತಿವಾದಿಗಳು ಮತ್ತು ಸಂಬಂಧಪಟ್ಟ ಎಲ್ಲರ ಬಳಿ ಸಾಕಷ್ಟು ದಾಖಲೆಗಳು ಇವೆ ಎಂಬುದು ನಮ್ಮ ಅರಿವಿಗೆ ಬಂದಿದ್ದು, ಸಲಹೆಗಳನ್ನು ಕಾರ್ಯಗತಗೊಳಿಸುವುದು ಸದ್ಯದ ತುರ್ತು. ಈ ನೆಲೆಯಲ್ಲಿ ಪ್ರತಿವಾದಿಗಳಾದ ಬಿಬಿಎಂಪಿ, ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳಿಗೆ ಕಾರ್ಯ ಯೋಜನೆ ರೂಪಿಸುವಂತೆ ನಿರ್ದೇಶಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಬಿಡಬ್ಲುಎಸ್‌ಎಸ್‌ಬಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಭಾಗವಹಿಸುವಿಕೆಯು ಅತಿ ಮುಖ್ಯವಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ಎಲ್ಲಾ ಪ್ರತಿವಾದಿಗಳು ಒಟ್ಟಾಗಿ ನಾಲ್ಕು ವಾರಗಳಲ್ಲಿ ಕಾರ್ಯಯೋಜನೆ ಸಲ್ಲಿಸಬೇಕು. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಯಿದೆ ಅಥವಾ ಬಿಬಿಎಂಪಿ ಕಾಯಿದೆ ಅಡಿ ಎಲ್ಲೆಲ್ಲಿ ಅಗತ್ಯವಿದೆ ಮತ್ತು ಎಲ್ಲೆಲ್ಲಿ ಗೊತ್ತುಪಡಿಸಿದ ಅಧಿಕಾರಿಗಳ (ಡಿಸಿಗ್ನೇಟೆಡ್‌ ಆಫೀಸರ್) ನೇಮಕವಾಗಿಲ್ಲ ಅಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರವು ಕ್ರಮಕೈಗೊಳ್ಳಬೇಕು” ಎಂದು ನ್ಯಾಯಾಲಯವು ಹೇಳಿದೆ.

Also Read
ರಾಜಕಾಲುವೆ ಒತ್ತುವರಿ: 2,052 ಒತ್ತುವರಿ ತೆರವು ಮಾಡಿರುವ ಬಗ್ಗೆ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಬಿಬಿಎಂಪಿ

ಒತ್ತುವರಿ ತೆರವು ಮತ್ತು ಕೆರೆ ಸಂರಕ್ಷಣೆ ಸೇರಿದಂತೆ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ತಂತ್ರಜ್ಞಾನದ ನೆರವಿನಿಂದ ಸಹಾಯ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸುವ ಮೂಲಕ ನಾಗರಿಕರ ದೂರು ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ. ಸಹಾಯ್‌ ಅಪ್ಲಿಕೇಶನ್-‌2 ಮೂಲಕ ಅದನ್ನು ಉನ್ನತೀಕರಣಗೊಳಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ಬಿಬಿಎಂಪಿ ತಿಳಿಸಿದೆ. ಈ ವಿಚಾರವನ್ನು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಖುದ್ದು ನ್ಯಾಯಾಲಯದಲ್ಲಿ ಹಾಜರಾಗಿ ವಿವರಿಸಿದರು.

ಸುದೀರ್ಘವಾಗಿ ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್‌ 4ಕ್ಕೆ ಮುಂದೂಡಿತು.

Kannada Bar & Bench
kannada.barandbench.com