ಬೆಮಲ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ರದ್ದು

ಸಿಬಿಐ ಮೂರು ಎಫ್‌ಐಆರ್‌ ದಾಖಲಿಸಿ ಪ್ರಾಥಮಿಕ ತನಿಖೆ ನಡೆಸಿದ್ದು, ಮುಂದುವರಿಯಲು ಏನೂ ಇಲ್ಲದಿರುವುದರಿಂದ ಅವುಗಳನ್ನು ಕೈಬಿಟ್ಟಿದೆ. ಹಾಗಿದ್ದರೂ ವಿಚಾರಣಾಧೀನ ನ್ಯಾಯಾಲಯ ಆರೋಪ ನಿಗದಿಗೆ ಮುಂದಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್‌.
Karnataka HC and BEML Ltd

Karnataka HC and BEML Ltd

Published on

“ಕೇಂದ್ರೀಯ ತನಿಖಾ ದಳ (ಸಿಬಿಐ) ಚುರುಕಿನಿಂದ ತನಿಖೆ ನಡೆಸಿಲ್ಲ” ಎಂದು ಈಚೆಗೆ ಅಭಿಪ್ರಾಯಟ್ಟಿರುವ ಕರ್ನಾಟಕ ಹೈಕೋರ್ಟ್‌, ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬೆಮಲ್‌) ಮಾಜಿ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಚೆನ್ನೈನ ವಿ ಆರ್‌ ಎಸ್‌ ನಟರಾಜನ್‌ ಅವರನ್ನು ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಆರೋಪ ಮುಕ್ತಿ ಕೋರಿದ್ದ ಅರ್ಜಿ ವಜಾಗೊಳಿಸಿದ್ದನ್ನು ಪ್ರಶ್ನಿಸಿ ವಿ ಆರ್‌ ಎಸ್‌ ನಟರಾಜನ್‌ ಸಲ್ಲಿಸಿದ್ದ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ರಾಚಯ್ಯ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಕುಟುಂಬ ಸದಸ್ಯರ ಸ್ವತಂತ್ರ ಆದಾಯ ಮೂಲವನ್ನು ಪರಿಗಣಿಸಬೇಕಿತ್ತು. ಆದರೆ, ಅದನ್ನು ಸಿಬಿಐ ಪರಿಗಣಿಸಿಲ್ಲ. ಸಿಬಿಐ ನಿರ್ಣಯಕ್ಕೆ ಬರಲು ಪರಿಶೀಲನಾ ವರದಿಯನ್ನು ಐದು ವರ್ಷಗಳ ಅವಧಿಗೆ ಮಿತಿಗೊಳಿಸಿ ಪರಿಗಣಿಸಿದ್ದರೂ ಎಫ್‌ಐಆರ್‌ ದಾಖಲಿಸುವಾಗ ಹತ್ತು ವರ್ಷದ ಅವಧಿಗೆ ಪರಿಗಣಿಸಲಾಗಿದೆ. ಹತ್ತು ವರ್ಷಗಳ ಅವಧಿಯಲ್ಲಿ ನಟರಾಜನ್‌ ಅವರು ಆದಾಯ ಮೀರಿದ ಆಸ್ತಿ ಗಳಿಕೆ ಹೊಂದಿದ್ದಾರೆ ಎಂದು ತನಿಖಾಧಿಕಾರಿ ಮೊದಲಿಗೆ ನಿರ್ಧಾರಕ್ಕೆ ಬಂದು, ಆನಂತರ ಅದನ್ನು ಐದು ವರ್ಷಕ್ಕೆ ಮಿತಿಗೊಳಿಸಿ, ನಟರಾಜನ್‌ ಆ ಕೊನೆಯ ಐದು ವರ್ಷದ ಅವಧಿಯಲ್ಲಿ ಆದಾಯ ಮೀರಿದ ಆಸ್ತಿ ಹೊಂದಿದ್ದಾರೆ ಎಂಬ ನಿರ್ಣಯಕ್ಕೆ ಬಂದಿರುವುದು ಮೂಲ ವರದಿಯ (ಸೋರ್ಸ್‌ ರಿಪೋರ್ಟ್‌) ಅಸಲಿಯತ್ತಿನ ಬಗ್ಗೆ ಅನುಮಾನ ಮೂಡಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“01.12.2002 ರಿಂದ 30.09.2012ರ ನಡುವಿನ ಪರಿಶೀಲನಾ ಅವಧಿ ಆಧರಿಸಿ, 2013 ಮತ್ತು 2014ರ ಅವಧಿಯಲ್ಲಿ ನಟರಾಜನ್‌ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ, ಸಿಬಿಐ ಮೂರು ಎಫ್‌ಐಆರ್‌ ದಾಖಲಿಸಿತ್ತು. ಆನಂತರ ಹೊಂದಿಕೆಯಾಗುವ ಪರಿಶೀಲನಾ ಅವಧಿ ಪರಿಗಣಿಸಲಾಗಿದ್ದು, ಯಾವುದೇ ಕಾರಣ ನೀಡದೇ ಅದನ್ನು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಕಡಿತಗೊಳಿಸಿರುವುದು ಅಕ್ರಮವಾಗಿದೆ. ಸಿಬಿಐ ಮೂರು ಎಫ್‌ಐಆರ್‌ ದಾಖಲಿಸಿ ಪ್ರಾಥಮಿಕ ತನಿಖೆ ನಡೆಸಿದ್ದು, ಮುಂದುವರಿಯಲು ಏನೂ ಇಲ್ಲದಿರುವುದರಿಂದ ಅವುಗಳನ್ನು ಕೈಬಿಟ್ಟಿದೆ. ಹಾಗಿದ್ದರೂ ವಿಚಾರಣಾಧೀನ ನ್ಯಾಯಾಲಯ ಆರೋಪ ನಿಗದಿಗೆ ಮುಂದಾಗಿದೆ” ಎಂದು ಹೈಕೋರ್ಟ್‌ ಅತೃಪ್ತಿ ಹೊರಹಾಕಿದೆ.

“ಆದಾಯ ಮೀರಿದ ಆಸ್ತಿ ಹೊಂದಿರುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ಪ್ರಾಥಮಿಕ ತನಿಖೆ ನಡೆಸುವುದು ಕಡ್ಡಾಯವಲ್ಲದಿದ್ದರೂ ತನಿಖಾಧಿಕಾರಿ ಮೂಲ ವರದಿಯನ್ನು ಆಧರಿಸಬೇಕು. ಒಂದೊಮ್ಮೆ ಮೂಲ ವರದಿ ಸರಿಯಾಗಿರದಿದ್ದರೆ ಅದನ್ನು ಆಧರಿಸಿ ಎಫ್‌ಐಆರ್‌ ದಾಖಲಿಸುವುದು ಪ್ರಕರಣದಲ್ಲಿ ಮುಂದುವರಿಯಲು ಸಾಲದು. ವಾಸ್ತವದಲ್ಲಿ ಈ ಪ್ರಕರಣದಲ್ಲಿ ತನಿಖಾಧಿಕಾರಿ ನ್ಯಾಯಯುತವಾಗಿ ತನಿಖೆ ನಡೆಸಿಲ್ಲ. ಹೀಗಾಗಿ, ಇಡೀ ತನಿಖೆ ಕಲುಷಿತವಾಗಿದೆ. ಅದಾಗ್ಯೂ, ಇದನ್ನು ಪರಿಗಣಿಸದ ವಿಚಾರಣಾಧೀನ ನ್ಯಾಯಾಲಯವು ಆರೋಪ ನಿಗದಿ ಮಾಡಲು ಮುಂದಾಗಿರುವುದು ಕಾನೂನಿನ ದುರ್ಬಳಕೆಯಾಗಿದೆ” ಎಂದಿದೆ.

ಪ್ರಕರಣದ ಹಿನ್ನೆಲೆ: ನಟರಾಜನ್‌ ಅವರು 01.12.2002 ರಿಂದ 19.04.2012ರವರೆಗೆ ತಮಗೆ ತಿಳಿದಿರುವ ಆದಾಯ ಮೂಲಗಳಿಂದ 2,57,56,227 ರೂಪಾಯಿಗೆ ಬದಲಾಗಿ ಹೆಚ್ಚುವರಿಯಾಗಿ 1,52,63,155 ರೂಪಾಯಿ ಸಂಪಾದಿಸಿದ್ದಾರೆ ಎಂದು ದೂರಲಾಗಿತ್ತು. ಇದನ್ನು ಆಧರಿಸಿ ಸಿಬಿಐ ಶೋಧ ಮತ್ತು ಜಫ್ತಿ ನಡೆಸಿ, ಎಫ್‌ಐಆರ್‌ ದಾಖಲಿಸಿತ್ತು. ಆನಂತರ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(e) ಅಡಿ ಆರೋಪದ ಸಂಬಂಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಆರೋಪ ಮುಕ್ತಿ ಕೋರಿ ನಟರಾಜನ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಹೀಗಾಗಿ, ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ನಟರಾಜನ್‌ ಪರವಾಗಿ ಹಿರಿಯ ವಕೀಲರಾದ ಬಿ ವಿ ಆಚಾರ್ಯ ಮತ್ತು ಸಂದೇಶ್‌ ಚೌಟ, ವಕೀಲ ವಿ ಜಿ ಭಾನು ಪ್ರಕಾಶ್‌, ಸಿಬಿಐ ಅನ್ನು ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌, ಕೆ ಎನ್‌ ನಿತಿನ್‌ ಗೌಡ, ರಾಮುಲಾ ಪ್ರತಿನಿಧಿಸಿದ್ದರು.

Attachment
PDF
VRS Natarajan Vs CBI
Preview
Kannada Bar & Bench
kannada.barandbench.com