ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ವಿರುದ್ಧದ ₹21,000 ಕೋಟಿ ತೆರಿಗೆ ಷೋಕಾಸ್‌ ನೋಟಿಸ್‌ ವಜಾ

“ನಾಲ್ಕು ಅರ್ಜಿಗಳನ್ನು ಮಾನ್ಯ ಮಾಡಲಾಗಿದೆ. ಷೋಕಾಸ್‌ ನೋಟಿಸ್‌ ಅನ್ನು ವಜಾ ಮಾಡಲಾಗಿದೆ. ಹಿಂದೆ ಸಲ್ಲಿಸಿದ್ದ ಎರಡು ಅರ್ಜಿಗಳು ಮಾನ್ಯತೆ ಕಳೆದುಕೊಂಡಿರುವುದರಿಂದ ಅವುಗಳನ್ನು ಇತ್ಯರ್ಥಪಡಿಸಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿತು.
GST and Karnataka HC
GST and Karnataka HC

ಬೆಂಗಳೂರಿನ ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಕಂಪೆನಿ ಪರವಾಗಿ ಹೈಕೋರ್ಟ್‌ ತಡೆಯಾಜ್ಞೆ ಮಾಡಿದ್ದರೂ ₹21,000 ಕೋಟಿ ಪಾವತಿಸುವಂತೆ ಕಂಪೆನಿಗೆ ಸರಕು ಮತ್ತು ಸೇವಾ ತೆರಿಗೆ ದಳ (ಡಿಜಿಜಿಐ) ಜಾರಿ ಮಾಡಿದ್ದ ಷೋಕಾಸ್‌ ನೋಟಿಸ್‌ ಅನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾ ಮಾಡಿದೆ.

ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನ ಸಂಸ್ಥಾಪಕರಾದ ಪೃಥ್ವಿ ರಾಜ್‌ಸಿಂಗ್‌ ಮತ್ತು ವಿಕಾಸ್‌ ತನೇಜಾ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ರಮೇಶ್‌ ಬಾಬು ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಆರು ಅರ್ಜಿಗಳ ವಿಚಾರಣೆ ನಡೆಸಿ, 2022ರ ನವೆಂಬರ್‌ 17ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು.

“ನಾಲ್ಕು ಮನವಿಗಳನ್ನು ಪುರಸ್ಕರಿಸಲಾಗಿದೆ. ಷೋಕಾಸ್‌ ನೋಟಿಸ್‌ ಅನ್ನು ವಜಾ ಮಾಡಲಾಗಿದೆ. ಹಿಂದೆ ಸಲ್ಲಿಸಿದ್ದ ಎರಡು ಅರ್ಜಿಗಳು ಮಾನ್ಯತೆ ಕಳೆದುಕೊಂಡಿರುವುದರಿಂದ ಅವುಗಳನ್ನು ಇತ್ಯರ್ಥಪಡಿಸಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಗೇಮ್ಸ್‌ಕ್ರಾಫ್ಟ್‌ಗೆ ₹21,000 ಕೋಟಿ ತೆರಿಗೆ ಪಾವತಿಸುವಂತೆ ಜಿಎಸ್‌ಟಿ ಪ್ರಾಧಿಕಾರವು 2022ರ ಸೆಪ್ಟೆಂಬರ್‌ 8ರಂದು ನೋಟಿಸ್‌ ಜಾರಿ ಮಾಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ನೋಟಿಸ್‌ಗೆ ಸೆಪ್ಟೆಂಬರ್‌ 23ರಂದು ನ್ಯಾ. ಎಸ್‌ ಆರ್‌ ಕೃಷ್ಣಕುಮಾರ್‌ ಅವರ ನೇತೃತ್ವದ ಪೀಠ ತಡೆ ನೀಡಿತ್ತು.

ಆದರೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ಅಂದೇ ಕಾನೂನುಬಾಹಿರ ಮತ್ತು ದುರುದ್ದೇಶಪೂರ್ವಕವಾಗಿ ಡಿಜಿಜಿಐ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ ಎಂದು ಆಕ್ಷೇಪಿಸಿ ಮತ್ತೆ ಕಂಪೆನಿಯು ಹೈಕೋರ್ಟ್‌ ಕದತಟ್ಟಿತ್ತು. ಇದರ ವಿಸ್ತೃತ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆದೇಶ ಕಾಯ್ದಿರಿಸಿತ್ತು.

ಈಗಾಗಲೇ ನೀಡಲಾಗಿದ್ದ ನೋಟಿಸ್‌ನಲ್ಲಿ ಅಂಶಗಳನ್ನೇ ಉಲ್ಲೇಖಿಸಿ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಆನ್‌ಲೈನ್‌ ಗೇಮ್‌ಗಳಿಗೆ ತೆರಿಗೆ ವಿಧಿಸುವ ವಿಚಾರವು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಪರಿಗಣನೆಗೆ ಬಾಕಿ ಇದೆ. ಅದಾಗ್ಯೂ, ಕಂಪೆನಿಗೆ ಶೇ. 28ರಷ್ಟು ತೆರಿಗೆ ವಿಧಿಸುವ ಮೂಲಕ ಡಿಜಿಜಿಐ ಪ್ರಮಾದ ಎಸಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

Also Read
ಗೇಮ್ಸ್‌ಕ್ರಾಫ್ಟ್‌ ಜಿಎಸ್‌ಟಿ ಬಾಕಿ ಪ್ರಕರಣ: ಬ್ಯಾಂಕ್‌ ಖಾತೆ ಜಫ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

2021ರ ನವೆಂಬರ್‌ನಲ್ಲಿ ಗೇಮ್ಸ್‌ಕ್ರಾಫ್ಟ್‌ ಕಚೇರಿಯ ಮೇಲೆ ಜಿಎಸ್‌ಟಿ ಪ್ರಾಧಿಕಾರ ದಾಳಿ ನಡೆಸಿತ್ತು. ಆ ಬಳಿಕ ಕಂಪೆನಿಯ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿತ್ತು. ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಮುನ್ನೆಲೆಗೆ ಬಂದಿತ್ತು.

ಗೇಮ್ಸ್‌ಕ್ರಾಫ್ಟ್‌ ಪರವಾಗಿ ಹಿರಿಯ ವಕೀಲರಾದ ಮುಕುಲ್‌ ರೋಹಟ್ಗಿ, ಅಭಿಷೇಕ್‌ ಮನು ಸಿಂಘ್ವಿ ಪ್ರಮುಖವಾಗಿ ವಾದಿಸಿದ್ದರು. ಜಿಎಸ್‌ಟಿ ಪ್ರಾಧಿಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌ ವೆಂಕಟರಾಮನ್‌ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com