ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ, ಬೆದರಿಕೆ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

“ಅರ್ಜಿ ವಜಾ ಮಾಡಲಾಗಿದೆ. ಮುಂದೆ ಅಧಿಸೂಚನೆ ಹೊರಡಿಸುವಾಗ, ಸಮಿತಿ ರಚಿಸುವಾಗ ಅಥವಾ ಸರ್ಕಾರ ಆದೇಶ ಮಾಡು ದೋಷಗಳು ಇರಬಾರದು” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿತು.
BJP MLA V Muniratna and Karnataka HC
BJP MLA V Muniratna and Karnataka HC
Published on

ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಚೆಲುವರಾಜು ಅವರಿಂದ ಹಣ ಪಡೆದು ವಂಚಿಸಿದ ಮತ್ತು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ತಮ್ಮ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರು ರದ್ದುಪಡಿಸುವಂತೆ ಕೋರಿ ಬಿಜೆಯ ರಾಜರಾಜೇಶ್ವರಿ ನಗರ ಶಾಸಕ ಬಿ ಮುನಿರತ್ನ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಬಿಜೆಪಿ ಮುಖಂಡ ಮುನಿರತ್ನ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಅರ್ಜಿ ವಜಾ ಮಾಡಲಾಗಿದೆ. ಮುಂದೆ ಅಧಿಸೂಚನೆ ಹೊರಡಿಸುವಾಗ, ಸಮಿತಿ ರಚಿಸುವಾಗ ಅಥವಾ ಸರ್ಕಾರ ಆದೇಶ ಮಾಡುವಾಗ ದೋಷಗಳು ಇರಬಾರದು” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿತು.

ಆದೇಶ ಪ್ರಕಟಿಸುವವರೆಗೆ ಪ್ರಕರಣದಲ್ಲಿ ಮುಂದುವರಿಯಬಾರದು ಎಂದು ಸಿಐಡಿ ಪೊಲೀಸರಿಗೆ ಹೈಕೋರ್ಟ್‌ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತ್ತು. ಈಗ ಅರ್ಜಿ ವಜಾ ಆಗಿರುವುದರಿಂದ ಮಧ್ಯಂತರ ಆದೇಶವೂ ವಜಾಗೊಳ್ಳಲಿದೆ.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರದೀಪ್‌ ಅವರು “ಅರ್ಜಿದಾರರ ವಿರುದ್ಧದ ತನಿಖೆಗೆ ಅನುಮತಿ ಕೇಳಲಾಗಿದೆ. ಆದರೆ, ಇನ್ನೂ ಪೂರ್ವಾನುಮತಿ ದೊರೆತಿಲ್ಲ. ಸಿಐಡಿಗೆ ಪೊಲೀಸ್ ಠಾಣೆ ಮಾನ್ಯತೆ ನೀಡಿ ಗೃಹ ಇಲಾಖೆ ಆದೇಶ ಮಾಡಿದೆ. ಸಿಐಡಿ ತನಿಖಾಧಿಕಾರಿಗಳು ಒಳಗೊಂಡ ತಂಡವನ್ನು ತನಿಖೆಗೆ ರಚನೆ ಮಾಡಲಾಗಿದೆ. ಹೀಗಾಗಿ, ತನಿಖೆ ನಡೆಸಿ ವರದಿ ಸಲ್ಲಿಸುವ ಅಧಿಕಾರ ಸಿಐಡಿಯ ಎಸ್‌ಐಟಿಗೆ ಇದೆ. ಅರ್ಜಿದಾರರ ಮೇಲಿನ ಆರೋಪಗಳು ಗಂಭೀರವಾಗಿದ್ದು, ಆ ಕುರಿತು ತನಿಖೆ ಹಾಗೂ ವಿಚಾರಣೆ ನಡೆಸುವುದು ಅಗತ್ಯವಾಗಿದೆ. ಹಾಗಾಗಿ, ಅರ್ಜಿ ವಜಾಗೊಳಿಸಬೇಕು” ಎಂದು ಕೋರಿದ್ದರು.

ಮುನಿರತ್ನ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ದೂರುದಾರ 2019ರರಿಂದ 2024ರವರೆಗೆ ನಡೆದಿರುವ ಕೃತ್ಯಗಳ ಬಗ್ಗೆ 2024ರ ಸೆಪ್ಟೆಂಬರ್‌ 13ರಂದು ವೈಯಾಲಿಕಾವಲ್‌ ಠಾಣೆ ದೂರು ನೀಡಿದ್ದಾರೆ. ಅಂದರೆ ದೂರು ನೀಡುವಲ್ಲಿಯೇ ವಿಳಂಬ ಮಾಡಿದ್ದಾರೆ. ಇದು ಕಾನೂನಿನಡಿ ಒಪ್ಪಿತವಲ್ಲ. ಇನ್ನೂ ದೂರು ದಾಖಲಿಸಿದ ನಂತರ ಕೂಡಲೇ ಪ್ರಕರಣದ ತನಿಖೆಯನ್ನು ಸಿಐಡಿಯ ಎಸ್‌ಐಟಿಗೆ ವರ್ಗಾಯಿಸಲಾಗಿದೆ. ಆದರೆ, ಸಿಐಡಿಯ ಎಸ್ಐಟಿ ಗೆ ಪೊಲೀಸ್ ಠಾಣೆ ಮಾನ್ಯತೆ ಇಲ್ಲ. ಇಂತಹ ಸಂದರ್ಭದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವ ಅಧಿಕಾರವೂ ಎಸ್‌ಐಟಿಗೆ ಇಲ್ಲ. ಮುನಿರತ್ನ ಶಾಸಕರಾಗಿದ್ದು, ಅವರ ವಿರುದ್ಧ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಹೀಗಾಗಿ ಪ್ರಕರಣ ಕುರಿತ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು” ಎಂದು ಕೋರಿದ್ದರು. ಈ ವಾದವನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಗುತ್ತಿಗೆದಾರ ಚೆಲುವರಾಜು ಅವರು “ರಾಜರಾಜೇಶ್ವರಿ ನಗರ ಕ್ಷೇತ್ರದ ವಾರ್ಡ್‌ ಸಂಖ್ಯೆ 42ರಲ್ಲಿ (ಲಕ್ಷ್ಮಿದೇವಿ ನಗರ) ಗಂಗಾ ಎಂಟರ್‌ಪ್ರೈಸಸ್‌ ಎಂಬ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಮಾಡುತ್ತಿದ್ದು, 2021ರ ಸೆಪ್ಟೆಂಬರ್‌ನಲ್ಲಿ ಮುನಿರತ್ನ ಅಂಗರಕ್ಷಕ ವಿಜಯಕುಮಾರ್‌ ಅವರು ಕರೆ ಮಾಡಿ ಶಾಸಕರ ಕಚೇರಿಗೆ ಬರುವಂತೆ ಸೂಚಿಸಿದ್ದರು. ಘನತ್ಯಾಜ್ಯ ಸಂಗ್ರಹಣೆ ಕೆಲಸಕ್ಕೆ 10 ಆಟೊ ರಿಕ್ಷಾ ಕೊಡಿಸುತ್ತೇನೆ. ಅದಕ್ಕೆ 20 ಲಕ್ಷ ಕೊಡುವಂತೆ ಮುನಿರತ್ನ ಬೇಡಿಕೆ ಇಟ್ಟಿದ್ದರು. ಸ್ನೇಹಿತರ ಬಳಿ ರೂ. 20 ಲಕ್ಷ ಸಾಲ ಪಡೆದು ಮುನಿರತ್ನ ಅವರಿಗೆ ಅಂಗರಕ್ಷಕನ ಮೂಲಕ ತಲುಪಿಸಿದ್ದೆ. ಎರಡು ದಿನಗಳ ಬಳಿಕ ವಿಚಾರಿಸಲಾಗಿ 10 ಆಟೊ ಹೆಚ್ಚುವರಿ ನೀಡುವುದಾಗಿ ಹೇಳಿ ವಂಚಿಸಿದ್ದಾರೆ” ಎಂದು ದೂರಿದ್ದಾರೆ.

“2023ರ ಸೆಪ್ಟೆಂಬರ್‌ನಲ್ಲಿ ಆಪ್ತ ಸಹಾಯಕ ಅಭಿಷೇಕ್‌ನಿಂದ ಕರೆ ಮಾಡಿಸಿ ಕಚೇರಿಗೆ ಕರೆಯಿಸಿ, 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಲಕ್ಷ ರೂಪಾಯಿಯನ್ನು ಸಾಲ ಪಡೆದು ಹೊಂದಿಸಿಕೊಡುತ್ತೇನೆ ಎಂದು ತಿಳಿಸಿದ್ದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ತಕ್ಷಣ ಹಣ ತಂದುಕೊಂಡುವಂತೆ ಸೂಚಿಸಿದ್ದರು. ಮತ್ತೆ ಕಚೇರಿಗೆ ಕರೆಯಿಸಿದ್ದು, ಹಣ ತಂದಿಲ್ಲ ಎಂದಾಗ ಹಲ್ಲೆ ನಡೆಸಿದ್ದರು” ಎಂದು ಚೆಲುವರಾಜು ಆರೋಪಿಸಿದ್ದರು.

“ಐದು ವರ್ಷ ನಾನು ಶಾಸಕನಾಗಿರುತ್ತೇನೆ. ಹೇಳಿದಂತೆ ನಡೆಯದಿದ್ದರೆ, ಹಣ ತಂದು ಕೊಡದಿದ್ದರೆ ಬೇರೆಯವರಿಗೆ ಗುತ್ತಿಗೆ ಕೆಲಸ ನೀಡಲಾಗುವುದು” ಎಂದು ಬೆದರಿಕೆ ಹಾಕಿದ್ದರು. ಅದಾದ ಮೇಲೆ ತುರ್ತಾಗಿ ಏಳು ದಿನಗಳ ಅಲ್ಪಾವಧಿಗೆ ಗುತ್ತಿಗೆ ಕರೆದು ಕಾರ್ಯಾದೇಶ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಹಣ ಕೊಡದಿದ್ದಕ್ಕೆ ಅಭಿಷೇಕ್‌, ವಿಜಯಕುಮಾರ್‌ ಅವರೂ ಹಲ್ಲೆ ಮಾಡಿದ್ದರು ಎಂದು ಚೆಲುವರಾಜು ದೂರಿದ್ದಾರೆ. ಇದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 504, 506, 420, 323, 385, 37ರ ಅಡಿ ಮುನಿರತ್ನ, ವಿಜಯ್‌ಕುಮಾರ್‌, ಅಭಿಷೇಕ್‌ ಮತ್ತು ವಸಂತ್‌ ಕುಮಾರ್‌ ವಿರುದ್ಧ ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Kannada Bar & Bench
kannada.barandbench.com