ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ದಾಸನಪುರ ಹೋಬಳಿಯ ಮಾಕಳಿ ಗ್ರಾಮದ ಸರ್ವೆ ನಂಬರ್‌ 13ರಲ್ಲಿದ್ದ 3 ಎಕರೆ 13 ಗುಂಟೆ ಭೂಮಿಯನ್ನು ಚಲುವರಾಯ ಸ್ವಾಮಿ ಕಬಳಿಕೆ ಮಾಡಿದ್ದಾರೆ ಎಂದು 2023ರ ಸೆ. 23ರಂದು ಭೂ ಕಬಳಿಕೆ ವಿಶೇಷ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು.
Minister N Chaluvaraya Swamy and Karnataka HC
Minister N Chaluvaraya Swamy and Karnataka HC
Published on

ಬೆಂಗಳೂರಿನ ದಾಸನಪುರ ಹೋಬಳಿಯ ಮಾಕಳಿ ಗ್ರಾಮದಲ್ಲಿ 9 ಗುಂಟೆ ಜಾಗವನ್ನು ಒತ್ತುವರಿ ಮಾಡಿದ ಆರೋಪ ಸಂಬಂಧ ಕೃಷಿ ಸಚಿವ ಎನ್‌ ಚಲುವರಾಯ ಸ್ವಾಮಿ ವಿರುದ್ಧ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ದೂರು ರದ್ದುಪಡಿಸುವಂತೆ ಕೋರಿ ಸಚಿವ ಚಲುವರಾಯ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.

ಪ್ರಕರಣದ ವಿವಾದಿತ ಜಮೀನಿನ ಕ್ರಯ 1923ರಿಂದಲೂ ಅಸ್ವಿತ್ವದಲ್ಲಿದೆ. ಅದನ್ನು ಮೂಲ ಮಾಲೀಕರು ಆಂಜನೇಯ ಸ್ವಾಮಿ ದೇವಾಲಯಕ್ಕೆ ದಾನವಾಗಿ ಮಾಡಿದ್ದರು. ಆನಂತರ ಆ ಜಮೀನನ್ನು ಸರ್ಕಾರ 1982ರಲ್ಲಿ ತಿಮ್ಮರಾಯಪ್ಪ ಅವರಿಗೆ ಮಂಜೂರು ಮಾಡಿತ್ತು. ಅವರಿಂದ ಚಲುವರಾಯಸ್ವಾಮಿ ಖರೀದಿಸಿದ್ದಾರೆ. ಅರ್ಜಿದಾರರು ಒತ್ತುವರಿ ಅಥವಾ ಕಬಳಿಕೆ ಮಾಡಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ. ವಿಸ್ತೃತ ಆದೇಶವು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Also Read
ಭೂ ಕಬಳಿಕೆ ಪ್ರಕರಣ: ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಪ್ರಕರಣದ ಹಿನ್ನೆಲೆ: ದಾಸನಪುರ ಹೋಬಳಿಯ ಮಾಕಳಿ ಗ್ರಾಮದ ಸರ್ವೆ ನಂಬರ್‌ 13ರಲ್ಲಿದ್ದ 3 ಎಕರೆ 13 ಗುಂಟೆ ಭೂಮಿಯನ್ನು ಕೃಷಿ ಸಚಿವ ಚಲುವರಾಯ ಸ್ವಾಮಿ ಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಸಂಬಂಧ 2023ರ ಸೆಪ್ಟೆಂಬರ್‌ 23ರಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ಈ ಜಮೀನು ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್‌ಗೆ ನಿರ್ದೇಶನ ನೀಡಿತ್ತು. ಆ ನಂತರ ಸರ್ವೇ ನಡೆಸಿ ಸುಮಾರು 9 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ತಹಶೀಲ್ದಾರ್‌ ವರದಿ ಸಲ್ಲಿಸಿದ್ದರು. ಅದನ್ನು ಆಧರಿಸಿ ವಿಶೇಷ ನ್ಯಾಯಾಲಯ ಸಚಿವ ಚಲುವರಾಯ ಸ್ವಾಮಿಗೆ 2024ರ ಮಾರ್ಚ್‌ 28ರಂದು ಸಮನ್ಸ್‌ ನೀಡಿತ್ತು. ಆ ಕ್ರಮ ಪ್ರಶ್ನಿಸಿ ಸಚಿವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com